ನವದೆಹಲಿ: ವಿದೇಶದಲ್ಲಿ ಕಪ್ಪುಹಣ ಇಟ್ಟವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸುವ ಮೊದಲು ಸರ್ಕಾರ, ಕೊನೆಯ ಬಾರಿಗೆ ಸ್ವಯಂಪ್ರೇರಿತವಾಗಿ ಮಾಹಿತಿ ಬಹಿರಂಗಪಡಿಸುವ ಅವಕಾಶವೊಂದನ್ನು ನೀಡುವ ಸಾಧ್ಯತೆ ಇದೆ.
`ಒನ್ ಟೈಂ ಕಂಪ್ಲಯನ್ಸ್'(ದಂಡ ಕಟ್ಟಿ ಹಣವನ್ನು ಅಧಿಕೃತಗೊಳಿಸುವುದು) ಮೂಲಕ ಕಠಿಣ ಶಿಕ್ಷೆಯಿಂದ ಪಾರಾಗಲು ಅವಕಾಶ ನೀಡುವ ಕುರಿತು ಚಿಂತನೆ ನಡೆಸುತ್ತಿದೆ. ಇದರಿಂದ ಕಪ್ಪುಹಣದ ಕುರಿತ ಮಾಹಿತಿ ಸುಲಭವಾಗಿ ಬಹಿರಂಗವಾಗಿ ಹೆಚ್ಚುವರಿ ಆದಾಯ ಸಿಗುವುದಷ್ಟೇ ಅಲ್ಲದೆ, ತನಿಖೆಗಾಗಿ ಆಗುವ ಕಾಲಹರಣವನ್ನೂ ತಪ್ಪಿಸಿದಂತಾಗಲಿದೆ. ಕಪ್ಪುಹಣ ಇಟ್ಟವರ ಆಸ್ತಿ ಮುಟ್ಟುಗೋಲು, 10 ವರ್ಷವರೆಗೆ ಜೈಲು ಶಿಕ್ಷೆಗೆ ಅವಕಾಶ ಮಾಡಿಕೊಡುವ ಕಠಿಣ ಕಾನೂನನ್ನು ಜಾರಿ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ.
ಬಜೆಟ್ ಅಧಿವೇಶನದಲ್ಲೇ ಈ ಕುರಿತ ವಿಧೇಯಕ ಮಂಡಿಸುವುದಾಗಿ ತಿಳಿಸಿದ್ದಾರೆ. ಆದರೆ, ಇದಕ್ಕೂ ಮೊದಲು ಕಪ್ಪುಹಣ ಇಟ್ಟವರು ಸ್ವ ಯಂಪ್ರೇರಿತರಾಗಿ ಮಾಹಿತಿ ಬಹಿರಂಗಪಡಿಸಿ ಕಠಿಣ ಕ್ರಮಗಳಿಂದ ಬಚಾವಾಗಲು ಅವಕಾಶ ನೀಡುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ, ಹಣಕಾಸು ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ಮಾತ್ರ ಇಂಥ ಸಾಧ್ಯತೆ ಸದ್ಯ ತಳ್ಳಿಹಾಕಿದ್ದಾರೆ. ಈ ರೀತಿಯ ತಪ್ಪಿಗೆ ಕ್ಷಮಾದಾನ ನೀಡುವ ಪ್ರಶ್ನೆಯೇಇಲ್ಲ ಎಂದಿದ್ದಾರೆ.