ನವದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೆಟ್ರೋಲ್ ಬಂಕ್ ಮಾಲೀಕರು ಇದೇ ಮಾರ್ಚ್ 16ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ತೀವ್ರ ವ್ಯತ್ಯಯವಾಗಲಿದೆ ಎಂದು ಹೇಳಲಾಗುತ್ತಿದೆ.
ಪೆಟ್ರೋಲಿಯಂ ಉತ್ಪನ್ನಗಳ ಡೀಲರ್ಸ್‌ಗಳ ಮೇಲೆ ಕೇಂದ್ರದ ಪೆಟ್ರೋಲಿಯಂ ಇಲಾಖೆ ವಿಧಿಸಿರುವ ಕೆಲ ನಿಯಮಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಪೆಟ್ರೋಲಿಯಂ ಡೀಲರ್ಸ್ ಸಂಘಟನೆ ಇದೇ ಮಾರ್ಚ್ 16ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಮಾರ್ಚ್ 16ರಿಂದ ಒಂದು ಪಾಳಿ ಮಾತ್ರ ಕೆಲಸ ನಿರ್ವಹಿಸಲು ನಿರ್ಧರಿಸಿದೆ. ಅಂದರೆ ಹಗಲಿನಲ್ಲಿ ಮಾತ್ರ ಪೆಟ್ರೋಲ್ ಬಂಕ್‌ಗಳು ಕಾರ್ಯ ನಿರ್ವಹಿಸಲಿದ್ದು, ಸಂಜೆ 7ರಿಂದ ಬೆಳಗಿನ ಜಾವದವರೆಗೂ ಬಂಕ್‌ಗಳನ್ನು ಮುಚ್ಚಲಾಗುತ್ತದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್ ಮಾಲೀಕರಿಗೆ ನೀಡುತ್ತಿರುವ ಕಮಿಷನ್ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಮತ್ತು ಇದಲ್ಲದೆ ಸರ್ಕಾರ ವಿಧಿಸಿರುವ ಕೆಲ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್‌ಗಳಿಗೆ ವಿಧಿಸಿರುವ ಕೆಲ ಮಾರ್ಕೆಟಿಂಗ್ ಡಿಸಿಪ್ಲಿನ್ ಗೈಡ್‌ಲೈನ್ಸ್‌ಗಳ ವಿರುದ್ಧ ಪೆಟ್ರೋಲ್ ಬಂಕ್ ಮಾಲೀಕರು ಅಸಮಾಧಾನಗೊಂಡಿದ್ದು, ಸರ್ಕಾರದ ನಿಯಮಾವಳಿಗಳು ಮಾರಕವಾಗುತ್ತಿವೆ ಎಂದು ಅಭಿಪ್ರಾಯಪಟ್ಟಿವೆ.
ಮಾರ್ಕೆಟಿಂಗ್ ಡಿಸಿಪ್ಲಿನ್ ಗೈಡ್‌ಲೈನ್ಸ್‌ಗಳಲ್ಲಿ ವಿಧಿಸಿರುವ ಕೆಲ ನಿಯಮಗಳು ಅಂದರೆ ಪ್ರತೀ ಪೆಟ್ರೋಲ್ ಬಂಕ್‌ಗಳೂ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು, ಅಲ್ಲದೇ ಈ ಶೌಚಾಲಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಇನ್ನು ಪೆಟ್ರೋಲಿಯಂ ಉತ್ಪನ್ನಗಳ ಅಳತೆಯಲ್ಲಿ ಯಾವುದೇ ರೀತಿಯ ಹೆಚ್ಚು-ಕಮ್ಮಿಯಾಗಬಾರದು. ಇದಕ್ಕೆ ನೇರವಾಗಿ ಪೆಟ್ರೋಲ್ ಬಂಕ್‌ಗಳೇ ಹೊಣೆಯಾಗುತ್ತವೆ. ಒಂದು ವೇಳೆ ಇಂತಹ ಗೊಂದಲಗಳು ಕಡುಬಂದರೆ ಅಂತಹ ಪೆಟ್ರೋಲ್ ಬಂಕ್‌ಗಳ ಪರವಾನಗಿ ರದ್ದು ಮಾಡಲಾಗುತ್ತದೆ ಎಂಬ ನಿಯಮಗಳನ್ನು ಹೇರಲಾಗಿದೆ.
ಇದೀಗ ಇದೇ ನಿಯಮಗಳು ಬಂಕ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದ್ದು, ಯಾರೋ ಮಾಡುವ ತಪ್ಪಿಗೆ ಬಂಕ್ ಮಾಲೀಕರನ್ನು ಹೊಣೆ ಮಾಡುವುದು ಸರಿಯಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜು ಮಾಡುವ ಸಂಸ್ಥೆಗಳು ಪೆಟ್ರೋಲ್ ಅಳತೆಯಲ್ಲಿ ಹೆಚ್ಚುಕಮ್ಮಿ ಮಾಡಿದರೆ ಬಂಕ್‌ಗಳ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಇನ್ನು ಬಂಕ್‌ಗಳಲ್ಲಿ ಶೌಚಾಲಯ ನಿರ್ಮಿಸುವುದು ಮತ್ತು ಅದನ್ನು ಗ್ರಾಹಕ ಉಪಯೋಗಕ್ಕೆ ನೀಡಿ ಸದಾ ಅವುಗಳನ್ನು ನಿರ್ವಹಿಸುವುದು ಕಠಿಣ ಕೆಲಸ. ಹೀಗಾಗಿ ಈ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಅಖಿಲ ಭಾರತ ಪೆಟ್ರೋಲಿಯಂ ಡೀಲರ್ಸ್ ಸಂಘಟನೆ ಒತ್ತಾಯಿಸಿದೆ.
ಇದಲ್ಲದೆ ಪ್ರಸ್ತುತ ಕೇಂದ್ರ ಸರ್ಕಾರ ಬಂಕ್‌ಗಳಿಗೆ ನೀಡುತ್ತಿರುವ ಕಮಿಷನ್ ಪ್ರಮಾಣವನ್ನು 2.5ರಿಂದ 5ಕ್ಕೆ ಏರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಇನ್ನು ಪೆಟ್ರೋಲ್ ಬಂಕ್ ಮಾಲೀಕರು ಹಮ್ಮಿಕೊಂಡಿರುವ ಈ ಪ್ರತಿಭಟನೆಯಲ್ಲಿ ಬೆಂಗಳೂರಿನ ಸುಮಾರು 800 ಬಂಕ್‌ಗಳು, ರಾಜ್ಯದ ಸುಮಾರು 1800 ಬಂಕ್‌ಗಳು ಮತ್ತು ದೇಶಾದ್ಯಂತ ಇರುವ ಸುಮಾರು 48 ಸಾವಿರ ಪೆಟ್ರೋಲ್ ಬಂಕ್‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿವೆ. ಇದಕ್ಕೂ ಮೊದಲು ಸಾಂಕೇತಿಕ ಪ್ರತಿಭಟನೆಯಾಗಿ ಇದೇ ಮಾರ್ಚ್ 10ರಂದು ಎಲ್ಲ ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್ ಖರೀದಿ ಮಾಡದಿರಲು ನಿರ್ಧರಿಸಿವೆ. ಒಂದು ವೇಳೆ ಕೇಂದ್ರ ಸರ್ಕಾರ ಆಗಲೂ ಬಗ್ಗದೇ ಹೋದರೆ ಮಾರ್ಚ್ 16ರಿಂದ ಒಂದು ಪಾಳಿಯಲ್ಲಿ ಮಾತ್ರ ಕೆಲಸ ನಿರ್ವಹಿಸಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ.