ದೇಶ

ಪ್ರಜಾಪ್ರಭುತ್ವದಲ್ಲಿ ಧಮ್ಕಿ ರಾಜಕೀಯ ನಡೆಯಲ್ಲ: ಪ್ರಧಾನಿ ಮೋದಿ

Srinivasamurthy VN

ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಧಮ್ಕಿ ರಾಜಕೀಯ ನಡೆಯಲ್ಲ. ಧಮ್ಕಿ ಹಾಕಿ ಯಾರನ್ನೋ ಬೆದರಿಸಬಹುದು ಎಂದ ತಿಳಿದುಕೊಂಡರೆ ಅದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದ ಮೇಲಿನ ಚರ್ಚೆ ವೇಳೆ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಜಾ ಪ್ರಭುತ್ವದಲ್ಲಿ ಯಾರ ಧಮ್ಕಿಯೂ ನಡೆಯೊಲ್ಲ. ಧಮ್ಕಿ ಹಾಕೋ ಸಂಸ್ಕೃತಿ ಯಾರದ್ದು ಎಂದು ಎಲ್ಲರಿಗೂ ಗೊತ್ತು ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ತಕ್ಕ ತಿರುಗೇಟು ನೀಡಿದರು.

'ನಾನು ಗುಜರಾತ್ ನಲ್ಲಿ 14 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಜೈಲಿಗೆ ಕಳುಹಿಸುವ ಧಮ್ಕಿ ಹಾಕಲಾಗುತ್ತಿತ್ತು. ಧಮ್ಕಿ ಹಾಕಿದ್ದು ಯಾರು ಅಂತ ಎಲ್ಲರಿಗೂ ಗೊತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೇ ನಮ್ಮ ದೇಶ ತಲೆಬಾಗಿಲ್ಲ. ಪಕ್ಷಕ್ಕಿಂತ, ರಾಜಕೀಯ ಹಿತಾಸಕ್ತಿಗಳಿಗಿಂತ ರಾಜ್ಯಗಳ ಹಿತಾಸಕ್ತಿ ಎಲ್ಲರಿಗೂ ಮುಖ್ಯವಾಗಬೇಕು' ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಎನ್ ಡಿಎ ಸರ್ಕಾರ ಯುಪಿಎ ಯೋಜನೆಗಳ ಕಾಪಿ ಮಾಡುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಹಲವು ಯೋಜನೆಗಳ ಹೆಸರು ಬದಲಿಸಿ ಯುಪಿಎ ತನ್ನದೆಂದು ಹೇಳಿಕೊಂಡಿದೆ ಎಂದು ತಿರುಗೇಟು ನೀಡಿದರು.

'ಕಾನೂನಿನ ಮಾರ್ಗದಲ್ಲಿಯೇ ಸರ್ಕಾರವನ್ನು ನಡೆಸಬೇಕಾಗುತ್ತದೆ. ಈ ದೇಶ ನಿರ್ಮಾಣವಾಗಿದ್ದು ಕೇವಲ ಸರ್ಕಾರಗಳಿಂದಲ್ಲ. ಕಾರ್ಮಿಕರು, ರೈತರು, ದೇಶ ನಿರ್ಮಾಣ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಎಲ್ಲರೂ ಕೊಡುಗೆ ನೀಡಿದ್ದಾರೆ ಎಂದು ಮೋದಿ ಹೇಳಿದರು. ಸಮಸ್ಯೆಗಳು ಹಳೆಯದಾಗಿದ್ದು ಅವುಗಳಿಗೆ ಪರಿಹಾರ ಹುಡುಕಬೇಕಿದೆ. ನಮ್ಮಲ್ಲೂ ಕೆಲ ಸಮಸ್ಯೆಗಳಿವೆ ಎಲ್ಲರೂ ಸೇರಿ ಸರಿ ಮಾಡೋಣ ಎಂದು ಮೋದಿ ಕರೆ ಕೊಟ್ಟರು.

ಮುಫ್ತಿ ವಿವಾದಾತ್ಮಕ ಹೇಳಿಕೆ: ಬೆಂಬಲ ಇಲ್ಲ ಎಂದ ಪ್ರಧಾನಿ
ಜಮ್ಮುಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ನೀಡಿದ್ದ ಹೇಳಿಕೆ ಇಂದು ಕೂಡಾ ಸಂಸತ್ ನ ಉಭಯ ಸದನಗಳಲ್ಲೂ ಗದ್ದಲಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರತಿಕ್ರಿಯಿಸಲೇ ಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಈ ಸಂದರ್ಭದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದರೂ ಕೂಡಾ, ಅದಕ್ಕೆ ಪ್ರತಿಪಕ್ಷಗಳು ತೃಪ್ತರಾಗದೇ ಪ್ರಧಾನಿ ಮೋದಿ ಪ್ರತಿಕ್ರಿಯೆಗೆ ಪಟ್ಟು ಹಿಡಿದವು.

ಬಳಿಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದ ಮೇಲಿನ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಿದ್ದಾಗ, ಮುಫ್ತಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಆಗ ಮಾತನಾಡಿದ ಪ್ರಧಾನಿ ಮೋದಿ ಮುಫ್ತಿ ಹೇಳಿಕೆಗೆ ನಮ್ಮ ಬೆಂಬಲ ಇಲ್ಲ. ಅದು ರಾಜ್ಯದ ವಿಷಯವಾಗಿದ್ದು, ಎಲ್ಲಾ ವಿಷಯಕ್ಕೂ ಪ್ರತಿಕ್ರಿಯೆ ನೀಡಬೇಕೆಂದೇನು ಇಲ್ಲ ಎಂದು ಹೇಳಿದರು.

SCROLL FOR NEXT