ದೇಶ

ಪಿಎಸಿಯಿಂದ ಯಾದವ್‌, ಭೂಷಣ್‌ಗೆ ಕೊಕ್ ಪ್ರಶ್ನಿಸಿದ ಮಾಯಾಂಕ್‌ ಗಾಂಧಿ

Vishwanath S

ನವದೆಹಲಿ: ಆಪ್‌ ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ)ಯಿಂದ ಪಕ್ಷದ ಹಿರಿಯ ಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರಿಗೆ ಕೊಕ್ ನೀಡಿರುವುದನ್ನು ಪಕ್ಷದ ಮತ್ತೋರ್ವ ಹಿರಿಯ ನಾಯಕ ಮಾಯಾಂಕ್‌ ಗಾಂಧಿ ಅವರು ತೀವ್ರವಾಗಿ ವಿರೋಧಿಸಿದ್ದಾರೆ.

ಮಾಯಾಂಕ್‌ ಗಾಂಧಿ ಅವರು ತಮ್ಮ ಬ್ಲಾಗ್‌ನಲ್ಲಿ ಹೇಳಿರುವಂತೆ ಪಕ್ಷದ ಸಂಚಾಲಕ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಬುಧವಾರದ ಸಭೆ ಕರೆದ ಉದ್ದೇಶ ಈ ಇಬ್ಬರು ನಾಯಕರನ್ನು ಪಿಎಸಿಯಿಂದ ಹೊರಗೆ ಹಾಕುವುದೇ ಆಗಿತ್ತು. ಒಂದು ವೇಳೆ ತನ್ನ ಆಜ್ಞೆಯಂತೆ ನಡೆಯದೇ ಹೋದರೆ ತಾನೇ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆಯುವುದಾಗಿ ಕೇಜ್ರಿವಾಲ್‌ ಬೆದರಿಕೆ ಹಾಕಿದ್ದರು ಎಂದು ಮಾಯಾಂಕ್‌ ಇದೀಗ ಬಾಂಬ್‌ ಸಿಡಿಸಿದ್ದಾರೆ.

ಬುಧವಾರ ದಿಲ್ಲಿ ಹೊರವಲಯದಲ್ಲಿ ನಡೆದಿದ್ದ ಆಪ್‌ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಯಾಂಕ್‌ ಅವರು, ಪ್ರಶಾಂತ್‌ ಭೂಷಣ್‌ ಮತ್ತು ಯೋಗೇಂದ್ರ ಯಾದವ್‌ ಅವರನ್ನು ಪಿಎಸಿಯಿಂದ ಹೊರಗೆ ಹಾಕುವ ಠರಾವನ್ನು ಮತ ಹಾಕಲಾದಾಗ ಪ್ರತಿಭಟನಾರ್ಥವಾಗಿ ಮತದಾನದಿಂದ ದೂರ ಉಳಿದಿದ್ದೇ. ಹೀಗಾಗಿ ಪಕ್ಷ ಕಾರ್ಯಕರ್ತರಲ್ಲಿ ತನ್ನ ಭಿನ್ನಮತ ಅಭಿಪ್ರಾಯಕ್ಕೆ ಕ್ಷಮೆಯಾಚಿಸಿದ್ದಾರೆ. ಇದೇ ವೇಳೆ ಬಾಯಿ ಮುಚ್ಚಿಕೊಂಡಿರಬೇಕೆಂಬ ಪಕ್ಷದ ಆದೇಶಕ್ಕೆ ಬದ್ಧನಾಗಿ ಉಳಿಯುವುದು ಅಪ್ರಾಮಾಣಿಕತನವಾಗುತ್ತದೆ ಎಂದು ಹೇಳಿದ್ದಾರೆ.

ಈ ನಡುವೆ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಮಧುಮೇಹ ಹಾಗೂ ಕೆಮ್ಮಿಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಪ್ರಕೃತಿ ಚಿಕಿತ್ಸೆಯನ್ನು ಪಡೆಯಲು ಆರಂಭಿಸಿದ್ದಾರೆ.

SCROLL FOR NEXT