ನವದೆಹಲಿ: ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ದೆಹಲಿ ಗ್ಯಾಂಗ್ ರೇಪ್ ಅಪರಾಧಿಗಳ ಪರ ಇಬ್ಬರು ವಕೀಲರಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ನಿನ್ನೆ ತಡ ರಾತ್ರಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
'ಬಿಬಿಸಿ ವಾಹಿನಿ ಪ್ರಸಾರ ಮಾಡಿದ ನಿರ್ಭಯಾ ಅತ್ಯಾಚಾರಿಯ ಸಂದರ್ಶನದ ಸಾಕ್ಷ್ಯಚಿತ್ರದಲ್ಲಿ ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಕೀಲರಾದ ಎಂ.ಎಲ್.ಶರ್ಮಾ ಮತ್ತು ಎ.ಪಿ.ಸಿಂಗ್ ಅವರಿಗೆ ನಾವು ನೋಟಿಸ್ ನೀಡಿದ್ದೇವೆ' ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಶನಿವಾರ ಹೇಳಿದ್ದಾರೆ.
ನಿನ್ನೆ ನಡೆದ ಬಾರ್ ಕೌನ್ಸಿಲ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವೃತ್ತಿಪರತೆಗೆ ವಿರುದ್ಧವಾಗಿ ನಡೆದುಕೊಂಡ ಈ ಇಬ್ಬರು ವಕೀಲರ ವಿರುದ್ಧ ಕ್ರಮ ತೆಗೆದುಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು.
ವಕೀಲರ ಕಾಯ್ದೆ ಪ್ರಕಾರ ಬಾರ್ ಕೌನ್ಸಿಲ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಒಂದು ವೇಳೆ ಅವರಿಂದ ಸಮರ್ಪಕ ಉತ್ತರ ದೊರೆಯದಿದ್ದರೆ, ಬಿಸಿಐ ಶರ್ಮಾ ಹಾಗೂ ಸಿಂಗ್ ಅವರ ವಕಾಲತು ಪರವಾನಿಗೆ ರದ್ದುಗೊಳಿಸುವ ಸಾಧ್ಯತೆ ಇದೆ.
ಇನ್ನು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಶರ್ಮಾ, ನಾನು ಯಾವುದೇ ತಪ್ಪು ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಶರ್ಮಾ ಅವರು ವಿವಾದಾತ್ಮಕ ಸಾಕ್ಷ್ಯ ಚಿತ್ರದಲ್ಲಿ, ಯುವತಿಯರು ಸರಿಯಾದ ರಕ್ಷಣೆಯಿಲ್ಲದೆ ಹೊರಗಡೆ ಹೋದಾಗ ಅತ್ಯಾಚಾರದಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.