ದೇಶ

ಮತ್ತೆ ಭೂಸ್ವಾಧೀನ ಕಿತ್ತಾಟ ತಿದ್ದುಪಡಿಗೆ ಸಿದ್ಧ ಎಂದ ಕೇಂದ್ರ

ನವದೆಹಲಿ: ಲೋಕಸಭೆಯಲ್ಲಿ ಮತ್ತೆ ಭೂಸ್ವಾಧೀನ ಕಿತ್ತಾಟ.. ಪಟ್ಟುಬಿಡದ ಪ್ರತಿಪಕ್ಷಗಳು...
ಸಂಧಾನಕ್ಕೆ ಸರ್ಕಾರ ಒಲವು. ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲಾಗಿದ್ದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಹೇಗಾದರೂ ಅಂಗೀಕರಿಸಬೇಕು ಎಂದು ಸರ್ಕಾರ ಕಾದಿದ್ದರೆ, ಪ್ರತಿಪಕ್ಷಗಳು ಮಾತ್ರ ಪಟ್ಟುಬಿಡುತ್ತಿಲ್ಲ.

ಸೋಮವಾರ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು, ಬಿಜೆಡಿ ಸೇರಿದಂತೆ ಎಲ್ಲ ಪ್ರತಿಪಕ್ಷಗಳೂ ವಿಧೇಯಕವನ್ನು ತೀವ್ರವಾಗಿ ಖಂಡಿಸಿವೆ. ಗ್ರಾಮೀಣಾಭಿವೃದ್ಧಿ ಸಚಿವ ಬೀರೇಂದರ್ ಸಿಂಗ್ ಅವರು ವಿಧೇಯಕ ಮಂಡಿಸುತ್ತಿದ್ದಂತೆ, ಎದ್ದುನಿಂತ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಚರ್ಚೆ ಆರಂಭವಾಗುವ ಮೊದಲು ವಿಧೇಯಕದ ಕೆಲವು ನಿಬಂಧನೆಗಳ ಬಗ್ಗೆ ವಿವರಣೆ ನೀಡಿ ಎಂದು ಕೋರಿದರು.

ಇದಕ್ಕೆ ನಿರಾಕರಿಸಿದ ಸಿಂಗ್, ಚರ್ಚೆಯಲ್ಲಿ ಉತ್ತರ ನೀಡುವಾಗಷ್ಟೇ ನಿಮ್ಮ ಪ್ರಶ್ನೆಗೆ ಪ್ರತಿಕ್ರಿಯಿಸುತ್ತೇನೆ ಎಂದರು. ಆದರೂ ಪಟ್ಟುಬಿಡದ ಪ್ರತಿಪಕ್ಷಗಳು ಒಂದೇ ಸಮನೆ ಸರ್ಕಾರದ ವಿರುದ್ಧ  ಕಿಡಿಕಾರಿದವು. ಭೂಸ್ವಾಧೀನ ವಿಧೇಯಕವು ರೈತ ವಿರೋಧಿಯಾಗಿದ್ದು, ದೇಶದ ಆಹಾರ ಭದ್ರತೆಗೇ ಅಪಾಯವುಂಟು ಮಾಡಲಿದೆ ಎಂದು ಆರೋಪಿಸಿದವು.

ಮಂಗಳವಾರ ಎಲ್ಲರೂ ವಿಧೇಯಕದ ವಿರುದ್ಧ ಮತ ಹಾಕಬೇಕು ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಮನವಿ ಮಾಡಿದರು. ಜತೆಗೆ, ಅದನ್ನು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕು ಎಂದೂ ಒತ್ತಾಯಿಸಿದರು. ಮತ್ತಷ್ಟು ತಿದ್ದುಪಡಿಗೆ ಸಿದಟಛಿ: ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ವಿಧೇಯಕಕ್ಕೆ ಇನ್ನಷ್ಟು ತಿದ್ದುಪಡಿ ತರಲು ಸಿದ್ಧ ಎಂದಿದೆ. ಕೈಗಾರಿಕಾ ಕಾರಿಡಾರ್‍ಗೆ ಭೂಮಿ ನೀಡುವುದನ್ನು ನಿರ್ಬಂಧಿಸುವ, ರೈತರ ಸಂಕಷ್ಟ ಅರಿಯಲು ಕ್ರಮ ಕೈಗೊಳ್ಳುವ, ಸ್ವಾಧೀನದಿಂದ ನಿರ್ವಸಿತರಾದ ಕುಟುಂಬದ ಸದಸ್ಯರಿಗೆ ಉದ್ಯೋಗ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.

ದೇಶದ ಹಿತಕ್ಕಾಗಿ ವಿಧೇಯಕಕ್ಕೆ ತಿದ್ದುಪಡಿ ತರಲು ನಾವು ತಯಾರಿದ್ದೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಮೊದಲು ಬರಡು ಭೂಮಿಯ `ಬ್ಯಾಂಕ್'ವೊಂದನ್ನು ಸ್ಥಾಪಿಸಿ, ಅಂತಹ ಭೂಮಿಯನ್ನು ಮಾತ್ರ ಕೈಗಾರಿಕಾ ಯೋಜನೆಗಳಿಗೆ ಬಳಸಲಾಗುವುದು ಎಂದೂ ಅವರು ಹೇಳಿದ್ದಾರೆ. ವಿಧೇಯಕಕ್ಕೆ ಸರ್ಕಾರ ಒಟ್ಟು 6 ತಿದ್ದುಪಡಿ ತರುವ ಸಾಧ್ಯತೆಯಿದೆ.

SCROLL FOR NEXT