ಡೆಹ್ರಾಡೂನ್: ಮಾಜಿ ಶಾಸಕ ಮಹೇಂದ್ರ ಸಿಂಗ್ ಭಾಟಿ ಹತ್ಯೆ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಪಿ.ಯಾದವ್ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
1992ರಲ್ಲಿ ನಡೆದ ಭಾಟಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಡೆಹ್ರಾಡೂನ್ ಸಿಬಿಐ ಕೋರ್ಟ್, ಆರೋಪಿಗಳಾದ ಯಾದವ್, ಪಾಲ್ ಸಿಂಗ್, ಕರಣ್ ಯಾದವ್ ಹಾಗೂ ಪ್ರಣೀತ್ ಭಾಟಿ ತಪ್ಪಿತಸ್ಥರೆಂದು ಮಾರ್ಚ್ 1ರಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
1992 ಸೆಪ್ಟೆಂಬರ್ 13ರಂದು ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಎಂಬಲ್ಲಿ ಡೈರಿ ಸರ್ಕಲ್‌ನ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಮಹೇಂದ್ರ ಸಿಂಗ್ ಭಾಟಿ ಆತನ ಸ್ನೇಹಿತ ಉದಯ್‌ಪ್ರಕಾಶ್ ಆರ್ಯ ಅವರನ್ನು ಭೂಗತ ಪಾತಕಿ ಡಿ.ಪಿ.ಯಾದವ್ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಯಾದವ್ ಜತೆ ಆತನ ಸಹಚರರಾದ ಕರಣ್ ಯಾದವ್ ಹಾಗೂ ಪ್ರಣೀತ್ ಭಟ್ಟಿ ಅವರುಗಳನ್ನು ಕೊಲೆ ಯತ್ನ , ಮಾರಕ ಶಸ್ತ್ರಾಸ್ತ್ರಗಳ ದುರ್ಬಳಕೆ, ಹತ್ಯೆ ಪಿತೂರಿ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.