ದೇಶ

ಯೋಗೇಂದ್ರ ಯಾದವ್, ಭೂಷಣ್ ಉಚ್ಚಾಟನೆಗೆ ಆಪ್ ಶಾಸಕರ ಆಗ್ರಹ

Lingaraj Badiger

ನವದೆಹಲಿ: ಆಮ್ ಆದ್ಮಿ ಪಕ್ಷದ ಆಂತರಿಕ ಕಲಹ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಪಕ್ಷದ ಸೋಲು ಬಯಸಿದ ಆರೋಪ ಎದುರಿಸುತ್ತಿರುವ ಹಾಗೂ ಆಪ್ ರಾಜಕೀಯ ವ್ಯವಹಾರಗಳ ಸಮಿತಿಯಿಂದ ವಜಾಗೊಂಡಿರುವ ಯೋಗೇಂದ್ರ ಯಾದವ್, ಶಾಂತಿ ಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದು ಆಪ್ ಶಾಸಕರು ಆಗ್ರಹಿಸಿದ್ದಾರೆ.

ಯಾದವ್ ಹಾಗೂ ಭೂಷಣ್ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿರುವ ಕರ್ವಾಲ್ ನಗರ ಶಾಸಕ ಕಪಿಲ್ ಮಿಶ್ರಾ ಅವರು, ಪಕ್ಷದ ತತ್ವ ಸಿದ್ಧಾತಂಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರು ಯಾರೇ ಆಗಿದ್ದರೂ ನಾವು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಹಾಗೂ ಶಾಂತಿ ಭೂಷಣ್ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದೇವೆ ಎಂದರು. ಅಲ್ಲದೆ ಆ ಪತ್ರಕ್ಕೆ ಎಎಪಿ ಶಾಸಕರಿಂದ ಒತ್ತಾಯಪೂರ್ವಕವಾಗಿ ಸಹಿ ಹಾಕಿಸಿಕೊಳ್ಳಲಾಗಿದೆ ಎಂಬುದನ್ನು ತಳ್ಳಿಹಾಕಿದ ಮಿಶ್ರಾ, ಪಕ್ಷದ ಎಲ್ಲಾ ಶಾಸಕರು ಸ್ವಇಚ್ಛೆಯಿಂದ ಸಹಿ ಹಾಕಿದ್ದಾರೆ ಎಂದು ತಿಳಿಸಿದರು.

ಈ ಮಧ್ಯೆ, ಎಎಪಿ ಮಾಜಿ ಶಾಸಕ ರಾಜೇಶ್ ಜಾರ್ಜ್ ಅವರು, ಯೇಗೇಂದ್ರ ಯಾದವ್ ಅವರ ಬಗ್ಗೆ ಪಕ್ಷದಲ್ಲಿ ಬಹುತೇಕ ನಾಯಕರಿಗೆ ತೀವ್ರ ಅಸಮಾಧಾನ ಇದೆ ಎಂದು ಹೇಳಿದ್ದಾರೆ.

SCROLL FOR NEXT