ದೇಶ

ರು.4 ಸಾವಿರ ಕೋಟಿ ಅಕ್ರಮ ಲಾಟರಿ ಜಾಲಕ್ಕೆ ಡಿ ರಕ್ಷೆ

ನವದೆಹಲಿ: ಹಲೋ ನಮಸ್ತೆ. ಅಭಿನಂದನೆಗಳು ನಿಮಗೆ. ಬ್ರಿಟನ್ ಸರ್ಕಾರದ ಲಾಟರಿಯಲ್ಲಿ ನಿಮಗೆ ರು.10 ಕೋಟಿ ಬಹುಮಾನ ಬಂದಿದೆ. ಅದಕ್ಕಾಗಿ ನೀವು ರು.2 ಲಕ್ಷ ಶುಲ್ಕ ಪಾವತಿ ಮಾಡಬೇಕು.

ಇಂಥ ಬಣ್ಣದ ಮಾತುಗಳ ಕರೆ ಅಥವಾ ಎಸ್‍ಎಂಎಸ್ ನಿಮ್ಮ ಮೊಬೈಲ್ ಬಂದಿದೆ ನೆನಪಿಡಿ ಯಾವತ್ತೂ ಆ ಮೋಸದ ಕರೆ, ಸಂದೇಶಗಳಿಗೆ ಬೀಳಬೇಡಿ. ಗೊತ್ತಿರಲಿ ಇಂಥ ದುಷ್ಟ ಜಾಲದ ಹಿಂದೆ ಇರುವುದು ಪಾಕಿಸ್ತಾನವೇ. ವಿಶೇಷವಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ. ಆತ ತನ್ನ ಅಪರಾಧ ಜಾಲದ ಮೂಲಕ ರು.4 ಸಾವಿರ ಕೋಟಿ ಮೌಲ್ಯದ ನಕಲಿ ಲಾಟರಿ ಜಾಲ ನಡೆಸುತ್ತಿದ್ದಾನೆ.

ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಜತೆಗೂಡಿ ಇಂಟೆಲಿಜೆನ್ಸ್ ಬ್ಯೂರೋ ಸಿದ್ಧಪಡಿಸಿದ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದೆ. ದಾವೂದ್ ಇಬ್ರಾಹಿಂ ನೇತೃತ್ವದಲ್ಲಿಯೇ ಈ ದುಷ್ಟ ಜಾಲ ನಡೆಯುತ್ತಿದೆ. ಹೀಗೆಂದು ಆಂಗ್ಲ ದಿನಪತ್ರಿಕೆ ಮೈಲ್ ಟುಡೇ ವರದಿ ಮಾಡಿದೆ.

ಹವಾಲಾ ಜಾಲ ತಡೆ ಕಾಯ್ದೆ  ವ್ಯಾಪ್ತಿಯಲ್ಲಿ ಬಹುಕೋಟಿ ಜಾಲದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅದು ಅಭಿಪ್ರಾಯಪಟ್ಟಿದೆ. ದಾವೂದ್ ಇಬ್ರಾಹಿಂನ ಜಾಲದ ಮೂಲಕ ನಡೆವ ಈ ನಕಲಿ ಲಾಟರಿ ಜಾಲದಿಂದ ಬರುವ ಲಾಭವನ್ನು ಉಗ್ರ ಕೃತ್ಯಕ್ಕೇ ಬಳಸಲಾಗುತ್ತದೆ. ಸಕ್ರಿಯವಾಗಿರುವ ಈ ಜಾಲದಲ್ಲಿ ದೇಶದ ಪ್ರಮುಖ ಬ್ಯಾಂಕ್ ಗಳಾದ ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಖಾಸಗಿ ಬ್ಯಾಂಕ್‍ಗಳಲ್ಲಿ 1,162ಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದ್ದು, ಅವುಗಳ ಮೂಲಕ ಹಣದ ವ್ಯವಹಾರ ನಡೆಸಲಾಗುತ್ತಿದೆ. ಈ ಪೈಕಿ 852 ಖಾತೆಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲೇ ತೆರೆಯಲಾಗಿದೆ. ಎಟಿಎಂ ಜಾಲ ಮತ್ತು ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ದಾವೂದ್‍ನ ಭಾರತೀಯ ಏಜೆಂಟರು ಇಂಥ ಕುಕೃತ್ಯಗಳನ್ನು ನಡೆಸುತ್ತಾರೆ. ಅವರು ಆಯ್ದ ಫೋನ್ ನಂಬರ್‍ಗಳಿಗೆ ಕರೆ ಮಾಡಿ ಅವರನ್ನು ವಂಚಿಸಿ ಹಣ ಪಾವತಿಸುವಂತೆ ಮಾಡುತ್ತಾರೆ.

ಖಾತೆಗೆ ಹಣ ಸಂದಾಯ ಮಾಡಿದ ತಕ್ಷಣವೇ ಅದನ್ನು ವಿಥ್‍ಡ್ರಾ ಮಾಡಲಾಗುತ್ತದೆ. ನಂತರ ಅದನ್ನು ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಯುಎಇಗಳಿಗೆ ಕಳುಹಿಸಲಾಗುತ್ತದೆ ಎನ್ನುವುದು ತನಿಖೆಯಿಂದ ಬಯಲಾಗಿದೆ.

ಪಾಕ್ ಫೋನ್ ಸಂಖ್ಯೆಗಳು:
ತನಿಖೆಯಲ್ಲಿ ಪಾಕಿಸ್ತಾನಕ್ಕೆ ಸೇರಿದ 1,175ಕ್ಕೂ ಅಧಿಕ ದೂರವಾಣಿ ಸಂಖ್ಯೆಗಳನ್ನು ಪರಿಶೀಲಿಸಲಾಗಿದೆ. ಇದರ ಜತೆಗೆ 305ಕ್ಕೂ ಹೆಚ್ಚು ಭಾರತೀಯ ದೂರವಾಣಿ ಸಂಖ್ಯೆಗಳನ್ನು ತನಿಖಾ ಸಂಸ್ಥೆಗಳು ಒರೆಗೆ ಹಚ್ಚಿವೆ. ಹಲವು ರಾಜ್ಯಗಳು: ಬಿಹಾರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮಧ್ಯಪ್ರದೇಶ, ಕೇರಳ, ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ದೇಶಾದ್ಯಂತ ಈ ಜಾಲ ಸಕ್ರಿಯವಾಗಿದೆ.

SCROLL FOR NEXT