ದೇಶ

ನೀವು ಎಂತಹ ಮಹಿಳೆ ಎಂದು ಗೊತ್ತು..!: ಮತ್ತೆ ವಿವಾದದಲ್ಲಿ ಶರದ್ ಯಾದವ್

Srinivasamurthy VN

ನವದೆಹಲಿ: ದಕ್ಷಿಣ ಭಾರತದ ಮಹಿಳೆಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಜೆಡಿಯು ಮುಖ್ಯಸ್ಥ ಶರದ್ ಯಾದವ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಮತ್ತೊಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ಬಿಹಾರದ ಜೆಡಿಯು ನಾಯಕ ಶರದ್ ಯಾದವ್ ಅವರು, ದಕ್ಷಿಣ ಭಾರತದ ಮಹಿಳೆಯರ ಮೈಬಣ್ಣದ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಶರದ್ ಯಾದವ್ ಅವರ ಹೇಳಿಕೆಯನ್ನು ಇಂದು ಸದನದಲ್ಲಿ ಖಂಡಿಸಲಾಗಿತ್ತು. ಅಲ್ಲದೆ ಕೂಡಲೇ ಶರದ್ ಯಾದವ್ ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಮಹಿಳಾ ಸಂಸದರು ಆಗ್ರಹಿಸಿದಾಗ, ಶರದ್ ಯಾದವ್ ಅವರು ಅದನ್ನು ನಿರಾಕರಿಸಿದರು.

ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಸ್ಮೃತಿ ಇರಾನಿ ಅವರನ್ನು ಉದ್ದೇಶಿಸಿ ಶರದ್ ಯಾದವ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. 'ನೀವು ಎಂತಹ ಮಹಿಳೆ ಎಂದು ನನಗೆ ಗೊತ್ತು' ಎಂದು ಹೇಳುವ ಮೂಲಕ ಶರದ್ ಯಾದವ್ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೇ ವೇಳೆ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘ (All India Democratic Women's Association)ದ ಸದಸ್ಯರು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಒಟ್ಟಾರೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ಮಹಿಳಾ ಸಂಘಟನೆಗಳ ಪ್ರತಿಭಟನೆ ಕೂಡ ಎದುರಿಸುವಂತಾಗಿದೆ.

SCROLL FOR NEXT