ದೇಶ

ಧೀಮಾಪುರ ಅತ್ಯಾಚಾರಿ ಹತ್ಯೆ ಪ್ರಕರಣ ಸಿಬಿಐ ತನಿಖೆ: ಸಿಎಂ

Vishwanath S

ಕೊಹಿಮಾ: ಧೀಮಾಪುರದಲ್ಲಿ ಅತ್ಯಾಚಾರ ಆರೋಪಿಯನ್ನು ಜೈಲಿನಿಂದ ಹೊರಗೆಳೆದು ಸಾರ್ವಜನಿಕರೇ ಹತ್ಯೆಗೈದ ಪ್ರಕರಣವನ್ನು ಸಿಬಿಐ ತನಿಖೆಗೆ  ಒಪ್ಪಿಸಲು ತೀರ್ಮಾನಿಸಲಾಗಿದೆ.

ಕಳೆದ ರಾತ್ರಿ ನಡೆದ ಸಂಪುಟ ಸಭೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಟಿ.ಆರ್‌.ಝೆಲಿಯಾಂಗ್‌ ಗುರುವಾರ ತಿಳಿಸಿದರು.

ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರೇ ಕಾನೂನು ಕೈಗೆತ್ತಿಕೊಂಡು ಜೈಲಿನಿಂದ ಅತ್ಯಾಚಾರದ ಆರೋಪಿಯನ್ನು ಹೊರಗೆ ತಂದು ಬೆತ್ತಲೆಗೊಳಿಸಿ ಪ್ರಮುಖ ರಸ್ತೆಗಳಲ್ಲಿ ಓಡಾಡಿಸಿ, ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣ ಮಾರ್ಚ್‌ 5ರಂದು ನಾಗಾಲ್ಯಾಂಡ್‌ನ ಧೀಮಾಪುರದಲ್ಲಿ ನಡೆದಿತ್ತು.

ಧೀಮಾಪುರ ಸೆಂಟ್ರಲ್‌ ಜೈಲ್‌ನಲ್ಲಿದ್ದ ಆರೋಪಿ ಸೈಯದ್‌ ಫರೀದ್‌ ಖಾನ್‌ ಎಂಬಾತನನ್ನು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎಳೆದು ತಂದು ರಸ್ತೆಯಲ್ಲೆಲ್ಲ ಅಟ್ಟಾಡಿಸಿ ಹೊಡೆದಿದ್ದರು. ಆ ಸಂದರ್ಭದಲ್ಲಿ ತೀವ್ರ ಗಾಯಗೊಂಡಿದ್ದ ಖಾನ್‌ ಹತನಾಗಿದ್ದ.

ಮೂಲತಃ ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಖಾನ್‌, ಫೆ.24ರಂದು ಧೀಮಾಪುರದ ಕಾಲೇಜು ವಿದ್ಯಾರ್ಥಿಯ ಮೇಲೆ ಅತ್ಯಾಚಾರ ನಡೆಸಿದ್ದ ಎಂಬ ಆರೋಪವಿತ್ತು. ಯುವತಿಯ ದೂರು ಆಧರಿಸಿದ ಆತನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

SCROLL FOR NEXT