ಸ್ಟಾಕ್ಹೋಮ್: ಸ್ವೀಡನ್ ನ ಪ್ರತಿಷ್ಠಿತ ರೆಸ್ಟೋರೆಂಟ್ ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಹಲವರಿಗೆ ಗಾಯವಾಗಿರುವ ಘಟನೆ ಬುಧವಾರ ಬಿಸ್ಕೋಪ್ಸ್ ಗಾರ್ಡನ್ ಉಪನಗರದಲ್ಲಿ ನಡೆದಿದೆ.
ಉಗ್ರರು ದಾಳಿ ನಡೆಸುವ ಕುರಿತಂತೆ ಯಾವುದೇ ಮಾಹಿತಿಗಳು ತಿಳಿದಿರಲಿಲ್ಲ. ಉಗ್ರರು ಇದ್ದಕ್ಕಿದ್ದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದು ಬಿಸ್ಕೋಪ್ಸ್ ಗಾರ್ಡನ್ ನಲ್ಲಿರುವ ಬಾರ್ ಒಂದಕ್ಕೆ ನುಗ್ಗಿದ್ದಾರೆ. ನಂತರ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಸ್ಥಳೀಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರರು ದಾಳಿ ನಡೆಸಿ ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪ್ರಕರಣ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಈವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾರ್ ನಲ್ಲಿದ್ದವರೆಲ್ಲರೂ ಟಿವಿಯಲ್ಲಿ ಫುಟ್ ಬಾಲ್ ಆಟವನ್ನು ನೋಡುತ್ತಿದ್ದೆವು. ಈ ವೇಳೆ ಬಾರ್ ಒಳಗೆ ಇಬ್ಬರು ವ್ಯಕ್ತಿಗಳು ಬಂದರು. ನಂತರ ಇದ್ದಕ್ಕಿದ್ದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಏನಾಗುತ್ತಿದೆ ಎಂಬುದರ ಕುರಿತು ಚಿಂತಿಸುವಷ್ಟು ಸಮಯವೂ ಸಿಗಲಿಲ್ಲ. ನೋಡನೋಡುತ್ತಿದ್ದಂತೆ ಪಕ್ಕದಲ್ಲಿದ್ದ ನನ್ನ ಗೆಳೆಯನಿಗೆ ರಕ್ತಸ್ರಾವವಾಗುತ್ತಿತ್ತು. ಅದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದೆ ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.