ದೇಶ

ವರದಕ್ಷಿಣೆ ಶೇ.10 ಪ್ರಕರಣ ಸುಳ್ಳು, ಕಾನೂನು ಸುಧಾರಣೆಗೆ ಸರ್ಕಾರ ಚಿಂತನೆ

Vishwanath S

ನವದೆಹಲಿ: ವರದಕ್ಷಿಣೆ ಕಿರುಕುಳ ಕಾನೂನು ಹೆಚ್ಚು ದುರ್ಬಳಕೆಯಾಗುತ್ತಿದ್ದು ದೇಶದಲ್ಲಿ ಪ್ರತಿ ವರ್ಷ ಸುಮಾರು 10 ಸಾವಿರಕ್ಕೂ ಹೆಚ್ಚು ವರದಕ್ಷಿಣೆ ಕಿರುಕುಳ ಸಂಬಂಧ ಸುಳ್ಳು ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಕಾನೂನು ಬದಲಾವಣೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಪ್ರತಿ ವರ್ಷ ಸುಮಾರು 1 ಲಕ್ಷ ಕಿರುಕುಳ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಈ ಪೈಕಿ 10 ಸಾವಿರ ಪ್ರಕರಣಗಳು ಸುಳ್ಳೆಂದು ಸಾಬೀತಾಗಿವೆ. ವರದಕ್ಷಿಣೆ ಕಿರುಕುಳದ ಕಾನೂನು ಹೆಚ್ಚು ದುರ್ಬಳಕೆ ಆಗುತ್ತಿರುವ ವಿಷಯ ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಸರಕಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 498ಎ (ವರದಕ್ಷಿಣೆ ಬೇಡಿಕೆ, ಪತಿ ಹಾಗೂ ಆತನ ಪೋಷಕರಿಂದ ಆಗುವ ಕಿರುಕುಳದ ತಡೆ)ಗೆ ತಿದ್ದುಪಡಿ ತರುವ ಪ್ರಸ್ತಾವನೆ ಮುಂದಿಟ್ಟಿದೆ.

ಸದ್ಯದ ಕಾನೂನಿನ ಪ್ರಕಾರ ವರದಕ್ಷಿಣೆ ಕಿರುಕುಳ ಜಾಮೀನು ರಹಿತ ಅಪರಾಧ ಜತೆಗೆ ಯಾವುದೇ ರಾಜಿ ಅಥವಾ ವಿನಾಯಿತಿಗೆ ಅವಕಾಶವಿಲ್ಲ. ಪರಿಣಾಮವಾಗಿ ಮಹಿಳೆ ದೂರು ನೀಡಿದ ಕೂಡಲೇ ಪತಿ ಹಾಗೂ ಆತನ ಪೋಷಕರನ್ನು ಬಂಧಿಸಬಹುದಾಗಿದೆ. ಒಂದು ವೇಳೆ ಈ ಕಾನೂನಿಗೆ ತಿದ್ದುಪಡಿ ತಂದರೆ, ಪತಿ, ಪತ್ನಿ ನಡುವೆ ರಾಜಿಗೆ ಯತ್ನಿಸಬಹುದು.

ಐಪಿಸಿ ಸೆಕ್ಷನ್‌ 498ಎಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಗೃಹ ಸಚಿವಾಲಯ, ಕೇಂದ್ರ ಸಂಪುಟಕ್ಕೆ ಕರಡು ಪ್ರತಿ ಕಳುಹಿಸಿದ್ದು ತಿದ್ದುಪಡಿ ವಿಧೇಯಕ ರಚನೆಗೆ ಅದನ್ನು ನಂತರ ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗುವುದು.

ರಾಜಿ ಮೂಲಕ ಪ್ರಕರಣ ಇತ್ಯರ್ಥ ಪಡಿಸಲು ಅವಕಾಶ ಇರುವಂತೆ ವರದಕ್ಷಿಣೆ ಕಾನೂನಿಗೆ ತಿದ್ದುಪಡಿ ತರುವುದು ಸೇರಿದಂತೆ ಕಾನೂನು ಆಯೋಗ ಮತ್ತು ನ್ಯಾಯಮೂರ್ತಿ ಮಳಿಮಠ್‌ ಸಮಿತಿ ಹಲವು ಶಿಫಾರಸುಗಳನ್ನು ಮಾಡಿವೆ . ಜತೆಗೆ, ಪ್ರಕರಣ ಸುಳ್ಳೆಂದು ಕಂಡುಬಂದಲ್ಲಿ ವಿಧಿಸಬಹುದಾದ ದಂಡದ ಮೊತ್ತವನ್ನು 1,000 ರೂ.ನಿಂದ 15,000ರೂ.ಗೆ ಏರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮಹಿಳಾ ಪರ ಕಾರ್ಯಕರ್ತರು ಈ ಹಿಂದೆಯೂ ಇಂಥ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕಾನೂನಿಗೆ ತಿದ್ದುಪಡಿ ತರುವುದು ಸುಲಭದ ವಿಷಯವಲ್ಲ. ಶೇ.10ರಷ್ಟು ಪ್ರಕರಣಗಳು ಸುಳ್ಳು ಎಂಬ ಕಾರಣಕ್ಕೆ ಕಾನೂನು ಸಡಿಲಗೊಳಿಸಿದರೆ, ಲಕ್ಷಾಂತರ ಶೋಷಿತ ಮಹಿಳೆಯರಿಗೆ ಇದರಿಂದ ಅನ್ಯಾಯವಾಗುತ್ತದೆ ಎಂಬುದು ಅವರ ವಾದ.

SCROLL FOR NEXT