ದೇಶ

ಮಾಮ್ 6 ತಿಂಗಳು ಇರುತ್ತೆ

Vishwanath S

ನವದೆಹಲಿ: ಮಂಗಳನ ಅಂಗಳಕ್ಕೆ ನೆಗೆದಿದ್ದ ನೌಕೆ ಮಾ.24ಕ್ಕೆ ಕಾರ್ಯ ನಿಲ್ಲಿಸುವುದಿಲ್ಲ. ಅದು ಇನ್ನೂ 6 ತಿಂಗಳ ಕಾಲ ಪಥದಲ್ಲಿ ಸಂಚರಿಸಲಿದೆ. ಹೀಗೆಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ (ಇಸ್ರೋ) ಡಾ.ಕಿರಣ್‍ಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ನಿಗದಿಯಾಗಿರುವಂತೆ ಮಂಗಳವಾರ ತಾಂತ್ರಿಕವಾಗಿ ಅದು ಸ್ಥಗಿತಗೊಳ್ಳಬೇಕಾಗಿತ್ತು. ಆದರೆ ನೌಕೆಯಲ್ಲಿ ಇಂಧನ ಉಳಿದಿದೆ. ಅದು ಪಥದಲ್ಲಿ ಸುತ್ತುವರಿಯಲು ನೆರವಾಗಲಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ. ಇದರಿಂದಾಗಿ ಅಂಗಾರಕನ ಅಂಗಳದಿಂದ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲು ನೆರವಾಗಲಿದೆ. ಅದರ ಹವಾಮಾನ ಮತ್ತು ಮೇಲ್ಮೈನ ಪರಿಸ್ಥಿತಿ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಈಗಾಗಲೇ ಮಾಮ್ ನಿಂದ ಪ್ರಮುಖ ಮಾಹಿತಿಗಳು ರವಾನೆಯಾಗಿವೆ. ಅವುಗಳ ಅಧ್ಯಯನ ನಡೆಸಲಾಗುತ್ತಿದೆ. ಸರಿಯಾದ ಕ್ರಮದಲ್ಲಿ ಮಾಹಿತಿ ವಿಶ್ಲೇಷಣೆ ಮಾಡಿದ ಬಳಿಕ ಅದನ್ನು ಬಹಿರಂಗ ಪಡಿಸಲಾಗುತ್ತದೆ ಎಂದು ಡಾ.ಕಿರಣ್ ತಿಳಿಸಿದ್ದಾರೆ.

ಜೂನ್‍ನಲ್ಲಿ ಸವಾಲು: ಜೂನ್ ತಿಂಗಳಲ್ಲಿ ಇಸ್ರೋಗೆ ಹೊಸ ಸವಾಲು ಎದುರಾಗಲಿದೆ. ಸೂರ್ಯ, ಭೂಮಿ ಮತ್ತು ಮಂಗಳ ಗ್ರಹ ಒಂದೇ ಸರಳ ರೇಖೆಯಲ್ಲಿ ಬರಲಿದೆ. ಈ ವೇಳೆಗೆ ನೌಕೆಯಿಂದ 14 ದಿನಗಳ ಕಾಲ ಯಾವುದೇ ರೀತಿಯ ಸಂಕೇತಗಳು ಇಸ್ರೋಗೆ ಲಭ್ಯವಾಗದು. ಜೂ.8-22ರ ನಡುವೆ ಈ ಪರಿಸ್ಥಿತಿ (ಬ್ಲ್ಯಾಕ್‍ಔಟ್) ಉಂಟಾಗಲಿದೆ ಎಂದಿದ್ದಾರೆ ಇಸ್ರೋ ಅಧ್ಯಕ್ಷ.

SCROLL FOR NEXT