ನವದೆಹಲಿ: ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತ ಚರ್ಚೆಗೆ ನೀಡಲಾಗಿದ್ದ ಆಹ್ವಾನವನ್ನು ತಿರಸ್ಕರಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಸಂಪ್ರದಾಯಕ್ಕಾಗಿ ಆಹ್ವಾನ ನೀಡಿರುವುದು ಹಾಸ್ಯಾಸ್ಪದ ಎಂದಿದ್ದಾರೆ.
ಈ ಸಂಬಂಧ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಪತ್ರ ಬರೆದಿರುವ ಸೋನಿಯಾ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ನಾಯಯಕರು, ಉದ್ದೇಶಿತ ಭೂ ಸ್ವಾಧೀನ ಮಸೂದೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದ್ದರು. ಅದಕ್ಕೆ ಇಂದು ಪತ್ರದ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ಕೆಲವು ಉದ್ಯಮಿಗಳ ಹಿತಾಸಕ್ತಿಗಾಗಿ ಕಾಯ್ದೆಯನ್ನು ಬಲಹೀನಗೊಳಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಇದೊಂದು ರಾಷ್ಟ್ರ ವಿರೋಧಿ ನೀತಿ ಎಂದಿರುವ ಸೋನಿಯಾ, ಸಂಕುಚಿತ ಮನೋಭಾವದ ರಾಜಕೀಯ ಮಾಡಬೇಡಿ ಎಂದು ಹೇಳಿದ್ದಾರೆ.
ರೈತರು ಈ ದೇಶದ 'ಬೆನ್ನೆಲೇಬು'. ಹೀಗಾಗಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ರೈತ ವಿರೋಧಿ ಕಾನೂನನ್ನು ಬೆಂಬಲಿಸುವುದಿಲ್ಲ ಎಂದಿರು ಸೋನಿಯಾ ಗಾಂಧಿ, ಯುಪಿಎ ಸರ್ಕಾರದ ಭೂಸ್ವಾಧೀನ ಮಸೂದೆಯನ್ನು ಜಾರಿಗೆ ಎಂದು ಒತ್ತಾಯಿಸಿದ್ದಾರೆ.