ದೇಶ

ಸತ್ತ ಹಸುಗಳ ಹೊಟ್ಟೆಯಲ್ಲಿ ಕನಿಷ್ಟ ಎಂದರೂ 30 ಕೆ.ಜಿ ಪ್ಲಾಸ್ಟಿಕ್ ಇರುತ್ತದೆ: ಪ್ರಕಾಶ್ ಜವಡೇಕರ್

Srinivasamurthy VN

ಹೈದರಾಬಾದ್: ಸತ್ತ ಹಸು ಅಥವಾ ಎಮ್ಮೆಗಳ ಹೊಟ್ಟೆಯಲ್ಲಿ ಕನಿಷ್ಟ ಎಂದರೂ 30 ಕೆ.ಜಿಗಿಂತಲೂ ಹೆಚ್ಚು ಪ್ಲಾಸ್ಟಿಕ್ ಅಂಶ ಇರುತ್ತದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜವಡೇಕರ್ ಶನಿವಾರ ಹೇಳಿದ್ದಾರೆ.

ಈ ಕುರಿತಂತೆ ಇಂದು ಹೈದರಾಬಾದ್ ನ ಕೆಬಿಆರ್ ಉದ್ಯಾನವನದಲ್ಲಿ ಮಾತನಾಡಿರುವ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜವಡೇಕರ್ ಅವರು, ರಾಷ್ಟ್ರದಲ್ಲಿ ಪ್ರತಿ ದಿನ ತ್ಯಾಜ್ಯ ಸಂಗ್ರಹದಲ್ಲಿ 15 ಸಾವಿರ ಪ್ಲಾಸ್ಟಿಕ್ ತ್ಯಾಜ್ಯ ಪ್ರಮಾಣವಿರುತ್ತದೆ. ಇದರಲ್ಲಿ ಉಪಯೋಗವಾಗುವುದು 9 ಟನ್ನುಗಳಷ್ಟು ಮಾತ್ರ.. ಭಾರತದಲ್ಲಿ ಎಲ್ಲಾ ರೀತಿಯ ಕಾನೂನುಗಳಿವೆ. ಸಮಸ್ಯೆ ಏನೆಂದರೆ ಆ ಕಾನೂನುಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಅಷ್ಟೇ ಎಂದು ಹೇಳಿದ್ದಾರೆ.

ಈಗಾಗಲೇ ರಾಜ್ಯದಾದ್ಯಂತ 40 ಮೈಕ್ರಾನ್ ಗಿಂತ ಕಡಿಮೆ ತೂಕದ ಪ್ರಾಸ್ಟಿಕ್ ಕ್ಯಾರಿಬ್ಯಾಗ್ ಗಳನ್ನು ನಿಷೇಧಿಸಲಾಗಿದೆ. ಆದರೂ ಅವುಗಳ ಬಳಕೆ ಜಾರಿಯಲ್ಲಿಯೇ ಇದೆ. ಪ್ಲಾಸ್ಟಿಕ್ ಬ್ಯಾಗ್ ಗಳ ಮೇಲೆ ನಿಷೇಧ ಹೇರಿರುವುದರಿಂದ ಕಸ ಆಯುವವರು ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದಾಗಿ ಕಸದ ಗುಂಡಿಯಲ್ಲಿ ಈ ಪ್ಲಾಸ್ಟಿಕ್ ಗಳು ಬಿದ್ದಿರುತ್ತವೆ. ಈ ಪ್ಲಾಸ್ಟಿಕ್ ಕವರ್ ನಲ್ಲಿರುವ ಆಹಾರ ಸೇವಿಸಲು ಹೋಗುವ ಹಸುಗಳು ಕೆಲವೊಮ್ಮೆ ಕವರ್ ಗಳನ್ನು ತಿಂದು ಬಿಟ್ಟಿರುತ್ತವೆ. ಇದರ ಪರಿಣಾಮವಾಗಿ ಲೆಕ್ಕವಿಲ್ಲದಷ್ಟು ಹಸುಗಳು ಸಾವನ್ನಪ್ಪಿರುವುದನ್ನು ದಿನನಿತ್ಯ ನಾವು ಕಾಣುತ್ತಲೇ ಇರುತ್ತೇವೆ. ಸಾವನ್ನಪ್ಪುವ ಪ್ರತಿ ಹಸು ಅಥವಾ ಎಮ್ಮೆಯ ದೇಹದಲ್ಲಿ 30 ಕೆಜಿ ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಅಂಶವಿರುತ್ತದೆ ಎಂದು ಹೇಳಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಭಾರತವಾಗಿಸುವ ನಿಟ್ಟಿನಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳ ಮೇಲೆ ತಪಾಸಣೆ ಹಾಗೂ ದಾಳಿ ಮಾಡುವ ಕಠಿಣ ಕ್ರಮ ಕೈಗೊಳ್ಳುವಂತಹ ಪರಿಣಾಮಕಾರಿಯಾದ ಕಾನೂನೊಂದನ್ನು ಜಾರಿಗೆ ತರಬೇಕಿದೆ. ಶೀಘ್ರದಲ್ಲೇ ಪ್ಲಾಸ್ಟಿಕ್ ಮುಕ್ತ ಭಾರವಾಗಿಸಲು ಸಾರ್ವಜನಿಕ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಪ್ರಕಾಶ್ ಜವಡೇಕರ್ ಹೇಳಿದ್ದಾರೆ.

SCROLL FOR NEXT