ನವದೆಹಲಿ: ಕಪ್ಪುಹಣದ ಉತ್ಪತ್ತಿಯನ್ನು ತಡೆಯಬೇಕೆಂದರೆ ಚೆಕ್‍ಗಳು ಹಾಗೂ ಪ್ಲಾಸ್ಟಿಕ್ ಕರೆನ್ಸಿಗಳ ಬಳಕೆ ಹೆಚ್ಚಿಸಿ. ಇದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಸಲಹೆ. ಆರ್ಥಿಕತೆಯು ಬೆಳವಣಿಗೆಯಾದಂತೆ ಕೆಲ ಮಾರ್ಗಸೂಚಿ ಗಳನ್ನು ಪಾಲಿಸಬೇಕಾಗುತ್ತದೆ. ಹೆಚ್ಚು ಹೆಚ್ಚು ಮಂದಿ ಕರೆನ್ಸಿ ಬಳಕೆಯನ್ನು ಕಡಿಮೆ ಮಾಡಿ, ಚೆಕ್ ಮತ್ತು ಕಾರ್ಡ್(ಪ್ಲಾಸ್ಟಿಕ್ ಕರೆನ್ಸಿ) ಗಳ ಬಳಕೆಯನ್ನು ಆರಂಭಿಸಬೇಕು. ಆಗ ಕಪ್ಪುಹಣಕ್ಕೂ ಕಡಿವಾಣ ಹಾಕಬಹುದು ಎಂದಿದ್ದಾರೆ ಜೇಟ್ಲಿ. ಶುಕ್ರವಾರ ನವದೆಹಲಿಯಲ್ಲಿ ಸೆಕ್ಯೂರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾದ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಸಚಿವ ಜೇಟ್ಲಿ, ಅತ್ಯಧಿಕ ಮೊತ್ತದ ನಗದು ವಹಿವಾಟನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಯಿಡುತ್ತಿದೆ. ರು. 1 ಲಕ್ಷಕ್ಕಿಂತ ಹೆಚ್ಚಿನ ಖರೀದಿ, ಮಾರಾಟಕ್ಕೆ ಪ್ಯಾನ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ.