ಮುಂಬೈ: 2002ರ ಗುದ್ದೋಡು ಪ್ರಕರಣ ಹೊಸ ತಿರುವು ಸಿಕ್ಕಿದೆ. ಇಷ್ಟು ವರ್ಷಗಳ ಕಾಲ ನಡೆದ ವಿಚಾರಣೆ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರು ಚಲಾಯಿಸಿದ್ದಾಗಿ ತಿಳಿದುಬಂದಿತ್ತು. ಆದರೆ ಇದೀಗ ಸಲ್ಮಾನ್ ಖಾನ್ ಕಾರು ಚಲಾಯಿಸಿಲ್ಲ. ಅಪಘಾತ ಸಂಭವಿಸಿದ ವೇಳೆ ಕಾರು ಚಲಾಯಿಸುತ್ತಿದ್ದದ್ದು ನಾನೇ ಎಂದು ಸಲ್ಮಾನ್ ಕಾರು ಚಾಲಕ ಅಶೋಕ್ ಸಿಂಗ್ ಹೇಳಿದ್ದಾನೆ.
ಇಂದು ಮುಂಬೈ ಸೆಷನ್ಸ್ ಕೋರ್ಟ್ ಮುಂದೆ ಮೊದಲ ಬಾರಿಗೆ ಹಾಜರಾದ ಸಿಂಗ್ ತನ್ನ ತಪ್ಪಿನಿಂದಾಗಿ ತಮ್ಮ ಮಾಲೀಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಈ ಅಪಘಾತ ಸಂಭವಿಸಿದಾಗ ಕಾರು ಚಲಾಯಿಸಿದ್ದು ನಾನೇ. ಯಾರ ಒತ್ತಡವು ಇಲ್ಲದೆ ಸ್ವ ಇಚ್ಛೆಯಿಂದ ಈ ಹೇಳಿಕೆ ನೀಡುತ್ತಿರುವುದಾಗಿ ಹೇಳಿದ್ದಾನೆ. ಇದರೊಂದಿಗೆ 13 ವರ್ಷಗಳ ಹಳೆಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಇದೇ ವೇಳೆ, ಸಲ್ಮಾನ್ ಕುಟುಂಬಸ್ಥರಿಂದ ಬೃಹತ್ ಪ್ರಮಾಣದಲ್ಲಿ ಹಣವನ್ನು ಪಡೆದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂಬ ಆರೋಪವನ್ನು ತಳ್ಳಿ ಹಾಕಿದ ಅಶೋಕ್ ಸಿಂಗ್, ಸಲ್ಮಾನ್ ಖಾನ್ ಅಥವಾ ಅವರ ತಂದೆ ನನ್ನನ್ನು ಸಂಪರ್ಕಿಸಿಲ್ಲ ಜತೆಗೆ ಯಾರಿಂದಲೂ ನಾನು ಹಣವನ್ನು ಪಡೆದಿಲ್ಲ ಎಂದು ಹೇಳಿದ್ದಾನೆ.
ಅಪಘಾತ ನಡೆದ ಸಂದರ್ಭದಲ್ಲಿ ಕಾರಿನ ಟೈರ್ ಹೊಡೆದು ಹೋಗಿ, ಬ್ರೇಕ್ ಜಾಮಾಗಿತ್ತು. ನಂತರ ಕಾರು ಫುಟ್ ಪಾತ್ ಮೇಲೆ ಅರಿಯಿತು ಎಂದು ತಿಳಿಸಿದ್ದಾನೆ.
2002ರ ಸೆಪ್ಟೆಂಬರ್ 28ರ ರಾತ್ರಿ ಮುಂಬೈನ ಬಾಂದ್ರಾದಲ್ಲಿ ನಡೆದ ಅಪಘಾತದಲ್ಲಿ ಒಬ್ಬರು ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡಿದ್ದರು.