ದೇಶ

ಸೂಪರ್ ಸಾನಿಕ್ ಆಕಾಶ್ ಕ್ಷಿಪಣಿ ಸೇನೆಗೆ ಸೇರ್ಪಡೆ

Srinivasamurthy VN

ನವದೆಹಲಿ: ಸೂಪರ್‌ಸಾನಿಕ್ 'ಆಕಾಶ್‌' ಕ್ಷಿಪಣಿಯನ್ನು ಮಂಗಳವಾರ ಅಧಿಕೃತವಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿದೆ.

ಭಾರತೀಯ ಸೇನೆಯ ದಶಕಗಳ ಅವಿರತ ಪ್ರಯತ್ನಕ್ಕೆ ಕೊನೆಗೂ ಯಶ ಲಭಿಸಿದ್ದು, 25 ಕಿ.ಮೀ ಅಂತರದಲ್ಲಿ ಹಾರಾಟ ನಡೆಸುವ ಶತ್ರು ಪಾಳಯದ ಯಾವುದೇ ವಿಮಾನಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸಬಲ್ಲ ಸಾಮರ್ಥ್ಯವಿರುವ ಆಕಾಶ್ ಕ್ಷಿಪಣಿಯನ್ನು ಇಂದು ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಆಕಾಶ್ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ಅಭಿವೃದ್ಧಿಪಡಿಸಿದ್ದು, ಹಲವು ಬಾರಿ ಇದನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ನಿರ್ಧಿಷ್ಟ ಗುರಿಯನ್ನು ನಿರ್ಧಿಷ್ಟ ಸಮಯದಲ್ಲಿ ಗುರಿ ತಲುಪುವ ಮೂಲಕ ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿತ್ತು.

ಭಾರತೀಯ ಸೇನೆಯ ಮುಖ್ಯಸ್ಥ ದಲ್ ಬೀರ್ ಸಿಂಗ್ ಸುಹಾಗ್ ಅವರು ದೆಹಲಿಯಲ್ಲಿ ನಡೆದ ಸೇನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಕಾಶ್ ಕ್ಷಿಪಣಿಯನ್ನು ಇಂದು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತೀಯ ಸೇನೆಗೆ ಹೊಸ ಆಯುಧ ಸೇರ್ಪಡೆಗೊಂಡಿದ್ದು, ನಮ್ಮ ದೇಶದ ವ್ಯಾಪ್ತಿಯ ಆಸ್ತಿಗಳನ್ನು ರಕ್ಷಣೆ ಮಾಡಲು ಇದು ಅನುಕೂಲಕರವಾಗಿದೆ ಎಂದು ಹೇಳಿದರು.

ಪ್ರಸ್ತುತ ಸೇನೆಗೆ 2 ಆಕಾಶ್ ದಳಗಳನ್ನು ಮತ್ತು ಆರು ಉಡಾವಣಾ ವಾಹಕಗಳನ್ನು ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಸುಮಾರು 19,500 ಕೋಟಿ ರು.ಗಳನ್ನು ವ್ಯಯಿಸಿದ್ದು, ಸಂಪೂರ್ಣ ಆಕಾಶ್ ಕ್ಷಿಪಣಿ ದಳ 2016ರ ಜೂನ್-ಜುಲೈ ತಿಂಗಳಲ್ಲಿ ಸೇನೆಗೆ ಸೇರ್ಪಡೆಯಾಗಲಿದೆ. ಭಾರತೀಯ ವಾಯುಸೇನೆ ಈಗಾಗಲೇ ಆಕಾಶ್ ಕ್ಷಿಪಣಿಗಳನ್ನು ಹೊಂದಿದ್ದು, ಕಾರ್ಯಾಚರಣೆಗೆ ಸನ್ನದ್ಧವಾಗಿದೆ.

ಆಕಾಶ್ ಕ್ಷಿಪಣಿಯ ಶೇ.90ರಷ್ಟು ಉಪಕರಣಗಳು ದೇಶಿಯವಾಗಿದ್ದು, ವಿವಿಧ ರೀತಿಯ ವಿಮಾನ, ಹೆಲಿಕಾಪ್ಟರ್ ಗಳು ಮತ್ತು ಮಾನವ ರಹಿತ ಯುದ್ಧ ವಿಮಾನ (ಡ್ರೋನ್)ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ. ಇನ್ನು ಯಾವುದೇ ರೀತಿಯ ವಾತಾವಾರಣದಲ್ಲಿಯೂ (ಹವಾಮಾನ) ಶತ್ರುಪಾಳಯದ ವಿಮಾನಗಳನ್ನು ಹೊಡೆದುರುಳಿಸಬಲ್ಲ ಶಕ್ತಿಯನ್ನು ಈ ಕ್ಷಿಪಣಿ ಹೊಂದಿದೆ.

ಭಾರತದ ವಿವಿಧ ಗಡಿ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ರಾಡಾರ್ ವ್ಯವಸ್ಥೆಗಳ ಮಾಹಿತಿಯನ್ನು ಆಧರಿಸಿ ಈ ಆಕಾಶ್ ಕ್ಷಿಪಣಿ ಕಾರ್ಯನಿರ್ವಹಿಸಲಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT