ನವದೆಹಲಿ: ಅಸ್ಸಾಂನಿಂದ ಅರುಣಾಚಲ ಪ್ರದೇಶದ ವಾಸ್ತವಿಕ ಗಡಿ ನಿಯಂತ್ರಣ ರೇಖೆಗೆ ಸಂಪರ್ಕ ಕಲ್ಪಿಸುವ ದೇಶದ ಅತಿದೊಡ್ಡ ಸೇತುವೆ ಲೋಕಾರ್ಪಣೆಗೆ ಸಿದ್ಧವಾಗಿದೆ. ರು.876 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 9.15 ಕಿ.ಮೀ. ಉದ್ದದ ಸೇತುವೆ ವರ್ಷಾಂತ್ಯ ದಲ್ಲೇ ಲೋಕಾರ್ಪಣೆಗೊಳ್ಳಲಿದೆ.
ಅಸ್ಸಾಂ ರಾಜ್ಯವು ಚೀನಾದೊಂದಿಗೆ 3488 ಕಿ.ಮೀ. ಉದ್ದದ ಗಡಿಯನ್ನು ಹೊಂದಿದ್ದರೂ, ಎಲ್‍ಎಸಿಗೆ ಸಂಪರ್ಕ ಕಲ್ಪಿಸುವ ಒಂದೇ ಒಂದು ವಿಮಾನ ನಿಲ್ದಾಣವನ್ನೂ ಅಸ್ಸಾಂ ಹೊಂದಿಲ್ಲ. ಆದರೆ, ಚೀನಾ ಮಾತ್ರ ಆ ಪ್ರದೇಶದಲ್ಲಿ ಸುಧಾರಿತ ರಸ್ತೆಗಳು, ಏರ್ ಸ್ಟ್ರಿಪ್‍ಗಳನ್ನು ನಿರ್ಮಿಸಿದೆ.
ಈ ಹಿನ್ನೆಲೆಯಲ್ಲಿ ಅಸ್ಸಾಂನ ಸದಿಯಾದಿಂದ ಅರುಣಾಚಲ ಪ್ರದೇಶದ ಧೋಲಾಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ನಿರ್ಮಿಸಲಾಗಿದೆ. ಈವರೆಗೆ ಮುಂಬೈನಲ್ಲಿರುವ ಸೇತುವೆಯೇ (3.55 ಕಿ. ಮೀ.) ದೇಶದ ಅತಿ ಉದ್ದದ ಬ್ರಿಡ್ಜ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈಗ ನಿರ್ಮಿಸಿರುವ ಸೇತುವೆ ಮುಂಬೈನ ಬ್ರಿಡ್ಜ್ ಗಿಂತ 3 ಪಟ್ಟು ಉದ್ದವಿದೆ.