ದೇಶ

ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಮೊಗಾ ಪ್ರಕರಣ, ಪಂಜಾಬ್ ಸಿಎಂ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

Lingaraj Badiger

ನವದೆಹಲಿ: ಪಂಜಾಬ್‌ನ ಮೊಗಾದಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಬಸ್‌ನಿಂದ ಹೊರಗೆಸೆದು ಹತ್ಯೆ ಮಾಡಿದ ಪ್ರಕರಣ ಮಂಗಳವಾರ ಸಂಸತ್ ನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು.

ಲೋಕಸಭೆಯಲ್ಲಿ ಬಾಲಕಿ ಸಾವಿನ ಪ್ರಕರಣದ ಕುರಿತು ನಿಲುವಳಿ ಸೂಚನೆ ಮಂಡಿಸಿ ಮತನಾಡಿದ ಕಾಂಗ್ರೆಸ್ ನಾಯಕ ಕ್ಯಾ.ಅಮರೀಂದರ್ ಸಿಂಗ್ ಅವರು, ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಮತ್ತು ಪಂಜಾಬ್ ಸಿಎಂ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪಂಜಾಬ್ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದರು.

ಇನ್ನು ರಾಜ್ಯಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು. ಎಡಪಕ್ಷದ ಮುಖಂಡ ಸೀತಾರಾಮ್ ಯೆಚೂರಿ ಅವರು ಮಾತನಾಡಿ, ಪಂಜಾಬ್ ನ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೇ ಪಂಜಾಬ್ ಸರ್ಕಾರದ ಮಂತ್ರಿಯೊಬ್ಬರು ಬಾಲಕಿ ಸಾವು ದೈವೇಚ್ಚೆ ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ನೀಡುವ ಸಚಿವರನ್ನು ಮುಂದುವರಿಸಬಾರದು ಎಂದು ಆಗ್ರಹಿಸಿದರು.

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಒಡೆತನಕ್ಕೆ ಸೇರಿದ್ದ ಬಸ್ ನಲ್ಲಿ ಕಳೆದ ವಾರ ತಾಯಿ ಮತ್ತು ಮಗಳಿಗೆ ಲೈಂಗಿಕ ಕಿರುಕುಳ ನೀಡಿ, ನಂತರ ಇಬ್ಬರನ್ನೂ ಬಸ್ ನಿಂದ ಹೊರದಬ್ಬಿದ್ದರು. ಇದರಿಂದಾಗಿ 14ವರ್ಷದ ಮಗಳು ಸಾವನ್ನಪ್ಪಿ, ತಾಯಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ಭಾರೀ ಟೀಕೆಗೆ ಒಳಗಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ, ಕಂಡಕ್ಟರ್ , ಕ್ಲೀನರ್ ಸೇರಿದಂತೆ ನಾಲ್ವರನ್ನು ಕೊಲೆ ಆರೋಪದಡಿಯಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಸಾವನ್ನಪ್ಪಿದ್ದ ಬಾಲಕಿ ಕುಟುಂಬಕ್ಕೆ ಪಂಜಾಬ್ ಸರ್ಕಾರ 23ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು.

SCROLL FOR NEXT