ನವದೆಹಲಿ: ಅರಣ್ಯಪ್ರದೇಶದ ವ್ಯಾಖ್ಯಾನ ಶೀಘ್ರದಲ್ಲೇ ಬದಲಾಗಲಿದೆಯೇ? ಭೂ ಪ್ರದೇಶಗಳನ್ನು ಅರಣ್ಯ ಎಂದು ಗುರುತಿಸಲು ಈವರೆಗೆ ಇದ್ದ ಮಾನದಂಡಗಳನ್ನು ಬದಲಾಯಿಸಲು ಕೇಂದ್ರಸರ್ಕಾರ ತೀರ್ಮಾನಿಸಿದೆ.
ಇದರಿಂದಾಗಿ ನಗರಗಳಲ್ಲಿ ಗ್ರೀನ್ ಬೆಲ್ಟ್ ಎಂದು ಗುರುತಿಸಲಾಗಿದ್ದ ಹಲವು ಪ್ರದೇಶಗಳು ವಾಣಿಜ್ಯ ಉದ್ದೇಶಗಳಿಗೆ ಮುಕ್ತವಾಗಲಿವೆ ಹಾಗೂ ಅಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಇದ್ದ ನಿಷೇಧ ತೆರವಾಗಲಿದೆ. ದಟ್ಟ ಅರಣ್ಯಗಳು ಹಾಗೂ ಆ ಅರಣ್ಯ ಪ್ರದೇಶದಲ್ಲಿರುವ ಮರಗಳ ಮೇಲ್ಪದರದ ಹರವಿನ ಮೇಲೆ ಇನ್ನು ಮುಂದೆ ಅದು ಅರಣ್ಯ ಪ್ರದೇಶವೋ ಅಥವಾ ಅಲ್ಲವೋ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಇಲ್ಲಿಯತನಕ ಅರಣ್ಯ ಎಂದು ಗುರುತಿಸಲ್ಪಟ್ಟಿರುವ ಪ್ರದೇಶಗಳಲ್ಲಿ ಮರಗಳ ದಟ್ಟಣೆಯ ಎಷ್ಟಿದೆ ಎಂಬ ಆಧಾರದ ಮೇಲೆ ಅವುಗಳನ್ನು ಅರಣ್ಯಗಳೆಂದು ಒಪ್ಪಿಕೊಂಡು ಉಳಿಸಿಕೊಳ್ಳಲಾಗುತ್ತದೆ ಎಂದು ಪರಿಸರ ಸಚಿವಾಲಯ ತನ್ನ ಕರಡು ಪ್ರಸ್ತಾವನೆಯಲ್ಲಿ ತಿಳಿಸಿದೆ.
ಇದರ ಪ್ರಕಾರ ಕಾಡುಗಳ ಹೆಚ್ಚಳಕ್ಕಾಗಿ ಜಾರಿಗೆ ತಂದಿದ್ದ 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸಂಚಕಾರ ಒದಗಲಿದ್ದು, ಕೈಗಾರಿಕಾ ಯೋಜನೆಗಳಿಗೆ ಹೆಚ್ಚಿನ ಮನ್ನಣೆ ದೊರೆಯಲಿದೆ. ಈ ಹೊಸ ವ್ಯಾಖ್ಯಾನದಿಂದಾಗಿ ದೇಶದ ಶೇ.20 ರಷ್ಟು ಭೂಪ್ರದೇಶವನ್ನು ಅರಣ್ಯವಾಗಿ ಉಳಿಸಿಕೊಳ್ಳಬೇಕೆಂಬ ಸುಪ್ರೀಂ ಕೋರ್ಟ್ ಮಾರ್ಗದರ್ಶಿಯೂ ಮೂಲೆಗುಂಪಾಗಲಿದೆ. ಈ ಹೊಸ ಪ್ರಸ್ತಾವನೆಯ ಕುರಿತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ್ದು, ಇದನ್ನು ಪರಿಸರ ವಿರೋಧಿ ನಡೆ ಎಂದು ಯಾರೂ ಭಾವಿಸಬೇಕಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಸಿರು ವಲಯದಲ್ಲಿ ಅವಕಾಶ ಇರಲಿಲ್ಲ. ಈ ಹಸಿರು ವಲಯಗಳಿಂದಾಗಿ ಕಾನೂನು ತೊಡಕು ಉಂಟಾಗುತ್ತಿರುವುದರಿಂದ ಯೋಜನೆಗಳು ನಿಧಾನವಾಗುತ್ತಿವೆ. ಕೆಲವು ಯೋಜನೆಗಳಿಗೆ ಒಪ್ಪಿಗೆ ದೊರೆಯುವುದೇ ಕಷ್ಟವಾಗಿದೆ. ಈ ಕಾರಣಕ್ಕಾಗಿ ಬದಲಾವಣೆಯ ಪ್ರಸ್ತಾವನೆ ಇಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ರಾಜ್ಯಗಳಿಗೆ ಅನುಕೂಲ
ಕೇಂದ್ರ ಪ್ರಸ್ತಾವಿಕ ಕರಡು ತಿದ್ದುಪಡಿಯನ್ನು ಗಂಭೀರವಾಗಿ ಪರಿಗಣಿಸಿ ಮುಂದುವರಿದರೆ ರಾಜ್ಯ ಸರ್ಕಾರಗಳಿಗೆ ಅನುಕೂಲವಾಗಲಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೂರ್ವಾನುಮತಿ ಇಲ್ಲದೆ ಮರಗಳನ್ನು ಕಡಿಯಲು ಅನುಮತಿ ಸಿಕ್ಕಿದಂತಾಗುತ್ತದೆ. ಹೊಸ ಪ್ರಸ್ತಾಪದ ಅನ್ವಯ ಆಯಾ ರಾಜ್ಯಗಳಲ್ಲಿರುವ ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಅರಣ್ಯ ಎನ್ನುವುದನ್ನು ವಿಮರ್ಷೆ ಮಾಡಲೂ ಅವಕಾಶ ನೀಡಲಾಗಿದೆ. ಸುಪ್ರೀಂಕೋರ್ಟ್ ಶೇ.20ರಷ್ಟು ಪ್ರದೇಶ ಅರಣ್ಯ ಎಂದು ತೀರ್ಪು ನೀಡಿದ್ದರಿಂದ ಅದನ್ನು ವಿಂಗಡಿಸಲು ಅನಾನುಕೂಲವಾಗಿತ್ತು.
* ಕೃಷಿ ಜಮೀನು ಆಯ್ತು, ಈಗ ಕಾಡಿಗೆ ಬರಲಿದೆ ಕಂಟಕ
* 1980ರಿಂದೀಚೆಗಿನ ಘೋಷಿತ ಅರಣ್ಯಗಳಿಗೆ ಬರಲಿದೆ ಕುತ್ತು
* ಭಾರಿ ಪ್ರಮಾಣದಲ್ಲಿ ಹಸಿರು ವಲಯಕ್ಕೆ ಕೊಡಲಿ
* ಯಾವುದೇ ಅನುಮತಿ ಇಲ್ಲದೇ ಮರ ಕಡಿಯಬಹುದು
* ಕೈಗಾರಿಕೆ/ವಾಣಿಜ್ಯ ಉದ್ದೇಶ ಬಳಕೆಗೆ ನಿರ್ಬಂಧ ಹೋಗಲಿದೆ
* ರಸ್ತೆ, ವಿಮಾನನಿಲ್ದಾಣ, ರೈಲ್ವೆ ಕಾಮಗಾರಿಗೆ ಕಾಡು ಕಡಿಯಬಹುದು
* ಹವಾಮಾನ ವೈಪರೀತ್ಯ, ನಗರ ಮಾಲಿನ್ಯ ಹೆಚ್ಚಾಗಲಿದೆ
* ನಗರ ಪ್ರದೇಶಗಳಲ್ಲಿದ್ದ ಕಿರು ಅರಣ್ಯಗಳಿಗೆ ಸಂಚಕಾರ
* ಇನ್ನಷ್ಟು ಕಾಂಕ್ರಿಟ್ ಕಾಡುಗಳಾಗಲಿವೆ ನಗರಗಳು
* ಅರಣ್ಯ ಭೂಮಿಯನ್ನೂ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಹುದು