ನವದೆಹಲಿ: ಮೋದಿ ಸರ್ಕಾರದ ಅತಿದೊಡ್ಡ ಸುಧಾರಣಾ ಕ್ರಮಗಳಲ್ಲಿ ಒಂದಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿಧೇಯಕಕ್ಕೆ ಲೋಕಸಭೆಯಲ್ಲಿ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ.
ಮಹತ್ವಾಕಾಂಕ್ಷಿ ಜಿಎಸ್‍ಟಿ ವಿಧೇಯಕವು ಮಂಗಳವಾರ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿರುವುದು ಸರ್ಕಾರಕ್ಕೆ ವರವಾಗಿ ಪರಿಣಮಿಸಿದೆ. ಆದರೆ, ಈವರೆಗೆ ವಿಧೇಯಕಕ್ಕೆ ಬೆಂಬಲ ಸೂಚಿಸಿದ್ದ ಎಐಎಡಿಎಂಕೆ, ಈಗ ಇದನ್ನು ವಿರೋಧಿಸುವ ಮೂಲಕ ಅಚ್ಚರಿ ಮೂಡಿಸಿದೆ. ಇದೇ ವೇಳೆ, ಬುಧವಾರ ಲೋಕಸಭೆಯಲ್ಲಿ ಜಿಎಸ್‍ಟಿ ವಿಧೇಯಕದ ಬಗ್ಗೆ ಮತದಾನ ನಡೆಯಲಿದ್ದು, ಕಾಂಗ್ರೆಸ್ ಮತದಾನದಿಂದ ದೂರವುಳಿಯಲು ನಿರ್ಧರಿಸಿದೆ.
ದೇಶದಲ್ಲಿ ಏಕೀಕೃತ ತೆರಿಗೆ ನೀತಿ ಜಾರಿ ಮಾಡುವ ಜಿಎಸ್‍ಟಿ ವಿಧೇಯಕವು ಲೋಕಸಭೆಯಲ್ಲಿ ಸುಲಭವಾಗಿ ಅಂಗೀಕಾರಗೊಳ್ಳಲಿದೆ. ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲ ಕಡಿಮೆಯಿರುವ ಕಾರಣ, ವಿಧೇಯಕ ಅಂಗೀಕಾರಕ್ಕೆ ಕಾಂಗ್ರೆಸ್‍ನ ಬೆಂಬಲ ಬೇಕೇ ಬೇಕಾಗುತ್ತದೆ. ಬೆಂಬಲಿಸುತ್ತೇವೆ, ಆದರೆ ಎಲ್ಲವನ್ನೂ ಒಪ್ಪಲ್ಲ: ಜಿಎಸ್‍ಟಿ ವಿಧೇಯಕವು ಹಿಂದಿನ ಯುಪಿಎ ಸರ್ಕಾರದ ಕೂಸು. ಹೀಗಾಗಿ ಕಾಂಗ್ರೆಸ್ ಈ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಆದರೆ, ವಿಧೇಯಕದಲ್ಲಿ ಬಿಜೆಪಿ ಸರ್ಕಾರ ತಂದಿರುವ ತಿದ್ದುಪಡಿಗಳನ್ನು ಒಪ್ಪಲಾಗುವುದಿಲ್ಲ ಎಂದೂ ಹೇಳಿದೆ.
ಲೋಕಸಭೆಯಲ್ಲಿ ವಿಧೇಯಕದ ಕುರಿತ ಚರ್ಚೆಗೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ, ನಾವು ಜಿಎಸ್‍ಟಿಯನ್ನು ಬೆಂಬಲಿಸುತ್ತೇವೆ. ಆದರೆ ಇದರ ಕೆಲವು ನಿಬಂಧನೆಗಳನ್ನು ನಾವು ವಿರೋಧಿಸುತ್ತೇವೆ. ಹಾಗಾಗಿ ಇದರ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಲು ವಿಧೇಯಕವನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಸ್ಥಾಯಿ ಸಮಿತಿಗೆ ರಿಯಲ್ ಎಸ್ಟೇಟ್ ವಿಧೇಯಕ: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭಾರಿ ಸುಧಾರಣೆ ಮಾಡಬೇಕೆಂಬ ಸರ್ಕಾರದ ಆಸೆಗೆ ತಣ್ಣೀರು ಬಿದ್ದಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಬಹಳಷ್ಟು ಕಡಿಮೆಯಿರುವ ಕಾರಣ ವಿಧೇಯಕಕ್ಕೆ ಅಗತ್ಯ ಬೆಂಬಲ ಸಿಗಲಿಲ್ಲ. ಮಂಗಳವಾರ ಪ್ರತಿಪಕ್ಷಗಳು ರಿಯಲ್ ಎಸ್ಟೇಟ್ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಇದನ್ನು ಕೊನೆಗೆ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿತು.