ದೇಶ

ಒಕ್ಲಹಾಮಾದಲ್ಲಿ ಭೀಕರ ಸುಂಟರಗಾಳಿ

Srinivasamurthy VN

ಒಕ್ಲಹಾಮ: ಅಮೆರಿಕದ ಒಕ್ಲಹಾಮದಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಸರಣಿ ಸುಂಟರಗಾಳಿಗೆ ನೂರಾರು ಮನೆಗಳು ಧ್ವಂಸವಾಗಿವೆ ಎಂದು ತಿಳಿದುಬಂದಿದೆ.

ಸ್ಥಳೀಯ ಸಮಯ ಸಂಜೆ ಸುಮಾರು 4.30ರ ವೇಳೆಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸುಂಟರಗಾಳಿ ಕ್ರಮೇಣ ತನ್ನ ವೇಗವನ್ನು ಗಣನೀಯವಾಗಿ ಹೆಚ್ಚಳ ಮಾಡಿಕೊಂಡಿತು. ಒಂದರ ಹಿಂದೊಂದರಂತೆ ಸರಣಿ ಸುಂಟರಗಾಳಿ ಸಷ್ಟಿಯಾಗಿದ್ದು, ಸುಂಟರಗಾಳಿಗೆ ಸಿಕ್ಕ ಎಲ್ಲ ವಸ್ತುಗಳನ್ನು ವೇಗವಾದ ಗಾಳಿ ಹೊತ್ತೊಯ್ದಿದೆ. ಸಾಕಷ್ಟು ಮನೆಗಳು, ಕಟ್ಟಡಗಳು ಹಾನಿಗೊಳಗಾಗಿದ್ದು, ಸಾವಿರಾರು ಜನರು ಸೂರಿಲ್ಲದೆ ನಿರಾಶ್ರಿತರಾಗಿದ್ದಾರೆ.

ಪ್ರಸ್ತುತ ಸ್ಥಳೀಯ ಕಾರ್ಪೊರೇಷನ್ ನ ಅಧಿಕಾರಿಗಳು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದು, ಸುಂಟರಗಾಳಿ ಹೊಡೆತಕ್ಕೆ ಒಕ್ಲಹಾಮಾದ ಕ್ರೀಕ್ ಮೇಲ್ಸೆತುವೆ, ಬ್ಲಾಂಚರ್ಡ್ ಪ್ರದೇಶ, ನಾರ್ಮನ್ ಅಂಡ್ ಕ್ಯಾಸಲ್ ಪ್ರದೇಶಗಳು ಹಾನಿಗೊಳಗಾಗಿವೆ ಎಂದು ಹೇಳಲಾಗುತ್ತಿದೆ. ಇನ್ನು 24 ಗಂಟೆಗಳ ಕಾಲ ಪರಿಸ್ಥಿತಿ ಹೀಗೆ ಮುಂದುವರೆಯುತ್ತದೆ ಎಂದು ಹಮಾಮಾನ ಇಲಾಖೆ ಮಾಹಿತಿ ನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಒಕ್ಲಹಾಮಾ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೆ ಅಲ್ಲಿರುವ ಎಲ್ಲ ಸಿಬ್ಬಂದಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ.

ಇದೇ ವೇಳೆ ಸುಂಟರಗಾಳಿ ಪ್ರಭಾವದಿಂದಾಗಿ ಒಕ್ಲಹಾಮಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ನದಿಗೆ ಇಳಿಯದಂತೆ ಭದ್ರತಾ ಪಡೆಗಳು ನಿವಾಸಿಗಳನ್ನು ಎಚ್ಚರಿಸಿದ್ದಾರೆ. ಸುಂಟರಾಗಾಳಿ ರಭಸಕ್ಕೆ ಒಕ್ಲಹಾಮಾದಲ್ಲಿರುವ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೂ ಹಾನಿಯಾಗಿದ್ದು, ಎಲ್ಲ ಪ್ರಾಣಿಗಳು ಅಪಾಯದಿಂದ ಪಾರಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಟ್ಟಾರೆ ನಿನ್ನೆ ಸಂಜೆ ಸಂಭವಿಸಿದ ಸುಂಟರಗಾಳಿಯಿಂದಾಗಿ ಅಮೆರಿಕದ ಒಕ್ಲಹಾಮಾದಲ್ಲಿ ಜನಜೀವನ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ.

SCROLL FOR NEXT