ನವದೆಹಲಿ: ಭೂಸ್ವಾಧೀನ ಸೇರಿದಂತೆ ಪ್ರಮುಖ ಸುಧಾರಣಾ ವಿಧೇಯಕಗಳ ಅಂಗೀಕಾರಕ್ಕಾಗಿ ಲೋಕಸಭೆ ಅಧಿವೇಶನವನ್ನು 3 ದಿನಗಳ ಕಾಲ ವಿಸ್ತರಿಸಿದ್ದಕ್ಕೆ ಕಾಂಗ್ರೆಸ್ ಕೆಂಡವಾಗಿದೆ. ಇದನ್ನು ನಿರಂಕುಶ ನಿರ್ಧಾರ ಎಂದಿರುವ ಕಾಂಗ್ರೆಸ್, ಈ ಬಗ್ಗೆ ಸದನಕ್ಕೇ ಮಾಹಿತಿಯಿಲ್ಲ ದಿರುವಾಗ ಮಾಧ್ಯಮಗಳಲ್ಲಿ ವರದಿಯಾಗಿದ್ದು ಹೇಗೆ ಎಂದು ಪ್ರಶ್ನಿಸಿದೆ. ಶುಕ್ರವಾರ ಲೋಕಸಭೆಯಲ್ಲಿ ಇದೇ ವಿಚಾರವನ್ನೆತ್ತಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್, ಎಡಪಕ್ಷಗಳು ಹಾಗೂ ಟಿಎಂಸಿ ಸದಸ್ಯರು, ಪದೇ ಪದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದವು. ಈ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು 3 ಬಾರಿ ಮುಂದೂಡಬೇಕಾಯಿತು.
ಭೂ ನೋಂದಣಿ ವಿಧೇಯಕಕ್ಕೆ ಸಮಿತಿ ಅಸ್ತು: ಭೂಮಿ ನೋಂದಣಿ ಪ್ರಕ್ರಿಯೆಯಲ್ಲಿ ವೇಗ, ಪಾರದರ್ಶಕತೆ ಮತ್ತು ಸ್ಪಷ್ಟತೆ ಮೂಡಿಸುವ ವಿಧೇಯಕಕ್ಕೆ ಕೆಲವೊಂದು ಬದಲಾವಣೆಗಳನ್ನು ತರಲು ಸಂಸದೀಯ ಸಮಿತಿ ಸಲಹೆ ನೀಡಿದೆ. ಈ ಬದಲಾವಣೆಗಳ ಪೈಕಿ ಆನ್‍ಲೈನ್ ನೋಂದಣಿಯೂ ಸೇರಿದೆ. ವಿಧೇಯಕಕ್ಕೆ ಒಪ್ಪಿಗೆ ಸೂಚಿಸುವ ಮುನ್ನ ಸಮಿತಿಯು, ಭೂಮಿಯನ್ನು ದೇಶದಲ್ಲಿ ಎಲ್ಲಾದರೂ ನೋಂದಣಿ ಮಾಡಬಹುದು ಎಂಬ
ನಿಬಂಧನೆ ಸೇರಿದಂತೆ ಕೆಲವು ಅಂಶಗಳತ್ತ ಎಚ್ಚರಿಕೆಯ ಹೆಜ್ಜೆಯಿಟ್ಟಿತು.
ಗಡ್ಕರಿ ರಾಜಿನಾಮೆಗೆ ಒತ್ತಾಯ: ಇದೇ ವೇಳೆ, ಪೂರ್ತಿ ಗ್ರೂಪ್‍ಗೆ ನೀಡಿದ ಸಾಲದಲ್ಲಿ ಅವ್ಯವಹಾರ ಆಗಿದೆ ಎಂಬ ಸಿಎಜಿ ವರದಿಯನ್ನು ರಾಜ್ಯ ಸಭೆಯಲ್ಲಿ ಉಲ್ಲೇಖಿಸಿದ ಕಾಂಗ್ರೆಸ್, ನಿತಿನ್ ಗಡ್ಕರಿ ಅವರ ರಾಜಿನಾಮೆಗೆ ಒತ್ತಾಯಿಸಿತು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು.
10 ತಿಂಗಳು ನಿದ್ದೆ ಮಾಡುತ್ತಿದ್ದಿರಾ?: ರಾಹುಲ್‍ಗೆ ಪ್ರಶ್ನೆ ಮೆಗಾ ಫುಡ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಗೆ ಶುಕ್ರವಾರ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಅವರು `ಕಪಟರಾಜಕೀಯ' ಮÁಡುವ ಮೂಲಕ ಜನರ ಹಾದಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೃಷಿ ಸಂಸ್ಕರಣಾ ಸಚಿವೆ ಹರ್‍ಸಿಮ್ರತ್ ಕೌರ್ ಲೋಕಸಭೆಯಲ್ಲಿ ರಾಹುಲ್‍ರನ್ನು ತರಾಟೆಗೆ ತೆಗೆದುಕೊಂಡರು. ಫುಡ್ ಪಾರ್ಕ್ ಯೋಜನೆ 2014ರ ಜು.11ರಂದು ರದ್ದಾಗಿದೆ. 10 ತಿಂಗಳ ಕಾಲ ನೀವೆಲ್ಲಿ ನಿದ್ದೆ ಮಾಡುತ್ತಿದ್ದಿರಿ? ನಿಜವಾದ ಸೇಡಿನ ರಾಜಕಾರಣ ಮಾಡುತ್ತಿರುವವರು ನೀವು ಎಂದು ಕೌರ್ ಹೇಳಿದರು. ಈ
ಹೇಳಿಕೆಯನ್ನು ಬಿಜೆಪಿ ಸ್ವಾಗತಿಸಿದರೆ, ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಶುರುಮಾಡಿದರು. ಇದೇ ವೇಳೆ, ಬಿಜೆಪಿ ಸದಸ್ಯ ಕಿರಿಟ್ ಸೋಮಯ್ಯ ಅವರು, ದೇಶದ ಜನರನ್ನು ತಪ್ಪುಹಾದಿಗೆಳೆಯುತ್ತಿರುವ ರಾಹುಲ್ ವಿರುದಟಛಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ನೋಟಿಸ್ ಕಳುಹಿಸಿದ್ದೇನೆ ಎಂದರು. ಗುರುವಾರ ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್, ಅಮೇಠಿಯಲ್ಲಿ ಮೆಗಾ ಫುಡ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಆಶ್ವಾಸನೆ ನೀಡಿದ್ದ ಪ್ರಧಾನಿ ಮೋದಿ, ಈಗ ಅದನ್ನು ರದ್ದುಮಾಡುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.