ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹಾತ್ವಾಕಾಂಕ್ಷೆಯ ಸರಕು ಮತ್ತು ಸೇವೆಗಳ ತೆರಿಗೆ ಹಾಗೂ ಭೂಸ್ವಾಧೀನ ತಿದ್ದುಪಡಿ ವಿಧೇಯಕಗಳು ಬಜೆಟ್ ಅಧಿವೇಶನದ ಅನುಮೋದನೆ ಸಿಗುವುದು ಅನುಮಾನ. ಹೀಗಾಗಿ ಸರ್ಕಾರ ಈ ಎರಡೂ ವಿಧೇಯಕಗಳನ್ನು ಸಂಸದೀಯ ಸಮತಿಯ ಪರಿಶೀಲನೆಗೆ ಒಪ್ಪಿಸು ಸಾಧ್ಯತೆಯಿದೆ.
ಜಿಎಸ್ ಟಿ ವಿಧೇಯಕಕ್ಕೆ ಈಗಾಗಲೇ ಲೋಕಸಭೆಯ ಒಪ್ಪಿಗೆ ಸಿಕ್ಕಿದೆ. ಹಾಗಾಗಿ ಈ ವಿಧೇಯಕವನ್ನು ರಾಜ್ಯ ಸಭೆಯ ಸಂಸದೀಯ ಸಮಿತಿಗೆ ನೀಡಲು ಸರ್ಕಾರ ಉದ್ದೇಶಿಸಿದೆ. ಇನ್ನು ಭೂ ಸ್ವಾಧೀನ ವಿಧೇಯಕವನ್ನು ಉಭಯ ಸದನಗಳ ಜಂಟಿ ಸಮಿತಿಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ.
ಸಮಿತಿಗೆ ಒಪ್ಪಿಸಲಿ: ಲೋಕಸಭೆಯ ಒಪ್ಪಿಗೆ ಪಡೆದಿರುವ ಜಿಎಸ್ ಟಿ ವಿಧೇಯಕವನ್ನು ಸಂಸದೀಯ ಸಮಿತಿಗೆ ಒಪ್ಪಿಸಬೇಕೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ನಾವು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಲ್ಲ. ಆದರೆ, ಅದಕ್ಕೆ ಅನೇಕ ತಿದ್ದುಪಡಿ ಮಾಡಲಾಗಿದೆ. ಹಾಗಾಗಿ ಅದನ್ನು ಪರಿಶೀಲಿಸುವ ಅಗತ್ಯ ಇದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.