ಭೋಪಾಲ್: ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದ ಆರೋಪಿಗಳಲ್ಲಿ 8ನೇ ಆರೋಪಿ ವಿಜಯ್ ಸಿಂಗ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಛತ್ತೀಸ್‍ಗಢದ ಕಾಂಕೇರ್ ಜಿಲ್ಲೆಯ ಲಾಡ್ಜ್‍ವೊಂದರಲ್ಲಿ ಶವ ಪತ್ತೆಯಾಗಿದೆ.
ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಈತ ವೃತ್ತಿಯಲ್ಲಿಫಾರ್ಮಸಿಸ್ಟ್ ಆಗಿದ್ದ. ಅಲ್ಲದೇ, ಹಲವು ರಾಜಕೀಯ ವ್ಯಕ್ತಿಗಳ ಜತೆ ಒಡನಾಟ ಇಟ್ಟುಕೊಂಡಿದ್ದ. ವಿಜಯ್ ಸಿಂಗ್ ಕತ್ತು, ಮೊಣಕೈ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದರಿಂದ ಕೊಲೆ ನಡೆದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಎದುರು ನೋಡುತ್ತಿದ್ದಾರೆ.
ಇತ್ತೀಚೆಗಷ್ಟೇ ವ್ಯಾಪಮ್ ಹಗರಣದ ಪ್ರಮುಖ ಆರೋಪಿ ಮಧ್ಯಪ್ರದೇಶ ಗವರ್ನರ್ ರಾಮ್ ನರೇಶ್ ಯಾದವ್ ಅವರ ಪುತ್ರ ಶೈಲೇಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮಧ್ಯಪ್ರದೇಶ ವೃತ್ತಿಪರ ಶಿಕ್ಷಣ ಇಲಾಖೆಯ ಪರೀಕ್ಷಾ ಮಂಡಳಿಯಲ್ಲಿ ಕೋಟ್ಯಂತರ ಹಣ ದುರುಪಯೋಗವಾಗಿದೆ ಎಂದು ಲೆಕ್ಕ ಪರಿಶೋಧನ ವರದಿಯಿಂದ ಬೆಳಕಿಗೆ ಬಂದಿತ್ತು.