ಹೈದರಾಬಾದ್: 2018ರಲ್ಲಿ ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ತೆಲುಗು ದೇಶಂ ಪಕ್ಷ ಸ್ಪರ್ಧಿಸಿದರೂ ಅಚ್ಚರಿ ಏನಿಲ್ಲ. ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಅದು ಮುಂದಾಗಿದೆ.
ಈ ಮೂಲಕ ಅದು ರಾಷ್ಟ್ರೀಯ ಪಕ್ಷವಾಗುವ ಮಹತ್ವಾಕಾಂಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದೆ. ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಒಡಿಶಾದಲ್ಲಿ ತೆಲುಗು ಭಾಷಿಕರು ಹೆಚ್ಚಾಗಿರುವ ಪ್ರದೇಶಗಳನ್ನೇ ಪ್ರಮುಖವಾಗಿ ಆಯ್ಕೆ ಮಾಡಲು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಪಕ್ಷ ಸ್ಥಾಪನೆಗೊಂಡು ಮೂವತ್ತು ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಟಿಡಿಪಿ ನಾಯಕತ್ವ ಇಂಥ ಒಂದು ಪ್ರಯತ್ನ ನಡೆಸಲು ಮುಂದಾಗಿದೆ.
ಅದಕ್ಕೆ ಪೂರಕವಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತಮಿಳುನಾಡು, ಕರ್ನಾಟಕ ಹಾಗೂ ಅಂಡಮಾನ್ ಮತ್ತು ನಿಕೋಬಾರ್‍ನಲ್ಲಿ ಸದಸ್ಯತ್ವ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ. ಮೂರು ಮಂದಿ ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದ್ದು ಆಂಧ್ರಪ್ರದೇಶ ಹಣಕಾಸು ಸಚಿವ ರಾಮಕೃಷ್ಣಡು ಮುಂದಾಳತ್ವವನ್ನು ವಹಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ?
ಕರ್ನಾಟಕದ ಗಡಿ ಪ್ರದೇಶಗಳಾದ ಬಳ್ಳಾರಿ, ರಾಯಚೂರು,ಕೋಲಾರ ಜಿಲ್ಲೆಗಳು ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿವೆ. ಈ ಪ್ರದೇಶಗಳಲ್ಲಿ ತೆಲುಗು ಭಾಷಿಕರ ಬಾಹುಳ್ಯ ಹೆಚ್ಚಾಗಿಯೇ ಇದೆ. ಹೀಗಾಗಿ, ಈ ಪ್ರದೇಶಗಳಲ್ಲಿ ಟಿಡಿಪಿ ಅದೃಷ್ಟವನ್ನು ಪರೀಕ್ಷೆಗೆ ಒಡ್ಡುವ ಸಾಧ್ಯತೆ ಇದೆ.