ರಾಯ್ ಪುರ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ವೇಳೆ ಸನ್ ಗ್ಲಾಸ್ ಧರಿಸಿದ್ದಕ್ಕಾಗಿ ಬಸ್ತಾರ್ ಜಿಲ್ಲಾಧಿಕಾರಿಗೆ ಛತ್ತೀಸ್ ಗಢ ಸರ್ಕಾರ ನೊಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಿದೆ.
ಸಾಂಪ್ರದಾಯಿಕ ಸಮವಸ್ತ್ರ ಧರಿಸದೇ ಸನ್ ಗ್ಲಾಸ್ ಧರಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುಕ್ಕೆ ಜಿಲ್ಲಾಧಿಕಾರಿ ಅಮಿತ್ ಕಟಾರಿಯಾ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಛತ್ತೀಸ್ ಗಢ ಸರ್ಕಾರ, ನೀವು ಅಖಿಲ ಭಾರತ ಸೆವಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದೀರಿ ಎಂದು ಹೇಳಿದೆ.
ಇನ್ನು ಮುಂದೆ ಜಿಲ್ಲಾಧಿಕಾರಿಗಳ ಘನತೆಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡುತ್ತಿರುವುದಾಗಿ ಸರ್ಕಾರ ಜಾರಿ ಮಾಡಲಾಗಿರುವ ನೊಟಿಸ್ ತಿಳಿಸಿದೆ. ಇದೇ ರೀತಿ ಸಾಂಪ್ರದಾಯಿಕ ಸಮವಸ್ತ್ರ ಧರಿಸದೇ ಇದ್ದ ಪರಿಣಾಮ ದಾಂತೆವಾಡ ಜಿಲ್ಲಾಧಿಕಾರಿ ಕೆ.ಸಿ ದೇವಸೇನಾಪತಿ ಅವರಿಗೂ ನೊಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಲಾಗಿದೆ.
ಮೇ.9ರಂದು ಉಕ್ಕು ಉತ್ಪಾದನಾ ಘಟಕದ ಉದ್ಘಾಟನೆಗಾಗಿ ಛತ್ತೀಸ್ ಗಢದ ನಕ್ಸಲ್ ಪೀಡಿತ ದಾಂತೇವಾಡಾ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಜಿಲ್ಲಾಧಿಕಾರಿ ಅಮಿತ್ ಕಟಾರಿಯಾ ಗ್ಲಾಸ್ ಧರಿಸಿ ಸ್ವಾಗತಿಸಿದ್ದರು.