ದೇಶ

ತೈಲ ದರ ನೀತಿ ಬದಲಾವಣೆ ಮಾಡಿ: ಕೇಂದ್ರಕ್ಕೆ ಜಯಾ ಆಗ್ರಹ

Lingaraj Badiger

ಚೆನ್ನೈ: ನಿನ್ನೆಯಷ್ಟೇ ತೈಲ ಕಂಪನಿಗಳು ಭಾರಿ ದರ ಏರಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಿದ್ದವು. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು, ತೈಲ ಕಂಪನಿಗಳ ದರ ಪರಿಷ್ಕರಣೆ ಮಾಡುವ ಅಧಿಕಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಶುಕ್ರವಾರದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ನಿಗದಿ ನೀತಿಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಂಧನ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ಈ ಹಿಂದಿನ ಯುಪಿಎ ಸರ್ಕಾರದ ತಪ್ಪು ನೀತಿಗಳನ್ನೇ ಜಾರಿಗೊಳಿಸುತ್ತಿದೆ ಎಂದು ಜಯಲಲಿತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ದರ ನಿಗದಿ ನೀತಿ ಬದಲಾಗಬೇಕು ಎಂದು ಒತ್ತಾಯಿಸಿದ್ದಾರೆ.

ಅತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಭಾರಿ ಏರಿಕೆಯಾಗಿರುವುದು ಹಾಗೂ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದಿರುವುದೇ ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಾರಣ ಎಂದು ತೈಲ ಕಂಪನಿಗಳು ಹೇಳಿದರೂ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಜಯಲಲಿತಾ ಹೇಳಿದ್ದಾರೆ.

ನಿನ್ನೆ ತೈಲ ಕಂಪನಿಗಳು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 3.13 ಹಾಗೂ ಡೀಸೆಲ್ ದರ 2.17ರುಪಾಯಿ ಏರಿಕೆ ಮಾಡಿದ್ದವು. ಶುಕ್ರವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.

SCROLL FOR NEXT