ನವದೆಹಲಿ: ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಸೆಪ್ಟೆಂಬರ್- ಅಕ್ಟೋಬರ್‍ನಲ್ಲಿ ನಡೆಯಲಿದೆ.
ಜುಲೈನಲ್ಲಿ ಬಿಹಾರ ಮತದಾರರ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದ್ದು, ಎರಡು ತಿಂಗಳ ನಂತರ ಚುನಾವಣೆ ನಡೆಸಲಾಗುವುದು. ಆದರೆ, ಚುನಾವಣಾ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹವಾಮಾನ, ಪರೀಕ್ಷೆ, ಪ್ರಕೃತಿ ವಿಕೋಪಗಳು, ಹಬ್ಬಗಳನ್ನು ನೋಡಿಕೊಂಡು ದಿನಾಂಕ ವನ್ನು ಅಂತಿಮಗೊಳಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಅವರು ತಿಳಿಸಿದ್ದಾರೆ.
ಇದೇ ವೇಳೆ, ತೀವ್ರ ಹಣಾಹಣಿಗೆ ಕಾರಣವಾಗಲಿರುವ ಈ ಚುನಾವಣೆ ಎಷ್ಟು ಹಂತದಲ್ಲಿ ನಡೆಯಲಿದೆ ಎನ್ನುವ ಕುರಿತು ಈಗಲೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ರಾಜ್ಯದಲ್ಲಿ ಹಣ ದುರುಪಯೋಗ ಹೆಚ್ಚಾಗಿ ನಡೆಯುವ ಸಾಧ್ಯತೆಯಿರುವುದರಿಂದ ಈ ಬಾರಿ ಯಾವುದೇ ಅಕ್ರಮ ನಡೆಯದಂತೆ ಸುವ್ಯವಸ್ಥಿತವಾಗಿ ಚುನಾವಣಾ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಿದ್ಧತೆ ಶುರು: ರಾಜ್ಯ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿವೆ. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕದನವೆಂದೇ ಭಾವಿಸಲಾಗಿರುವ ಈ ಚುನಾವಣೆ ಇಡೀ ದೇಶದ ಗಮನ ಸೆಳೆಯಲಿದೆ. ಈ ಚುನಾವಣೆ ಸೋಲು-ಗೆಲುವು ನಿತೀಶ್ ಅವರ ಮುಂದಿನ ರಾಜಕೀಯ ಭವಿಷ್ಯವನ್ನೂ ನಿರ್ಧರಿಸಿದೆ. ಜತೆಗೆ, ರಾಷ್ಟ್ರೀಯ ಮಟ್ಟದಲ್ಲಿ ಜನತಾ ಪರಿವಾರ ಒಂದಾಗಬೇಕೆನ್ನುವ ಬಯಕೆಗೆ ಈ ಚುನಾವಣೆ ವೇದಿಕೆಯಾಗುವ ನಿರೀಕ್ಷೆ ಇದೆ. ಆದರೆ, ಸದ್ಯ ಸೀಟು ಹಂಚಿಕೆ ವಿಚಾರವಾಗಿ ಆರ್‍ಜೆಡಿ ಮತ್ತು ಜೆಡಿಯು ಒಪ್ಪಂದವೊಂದಕ್ಕೆ ಬರುವಲ್ಲಿ ವಿಫಲವಾಗಿವೆ.