ಮದುರೈ: ವಿರಸದಿಂದಾಗಿ ಬೇಸತ್ತಿದ್ದ ಹೆಂಡತಿಯೊಬ್ಬಳು ತನ್ನ ಗಂಡನ ಮನೆಗೆ ಬೆಂಕಿ ಇಟ್ಟು ಕುಟುಂಬದ ಆರು ಮಂದಿಯನ್ನು ಬಲಿ ತೆಗೆದುಕೊಂಡಿರುವ ಘಟನೆ ಮದುರೈನ ಕುಮರಪುರಂನಲ್ಲಿ ಬುಧವಾರ ನಡೆದಿದೆ.
ಕಣ್ಣನ್ (27) ಮತ್ತು ಪಂಡೀಶ್ವರಿ ಎಂಬುವವರು ಕೆಲವು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು. ಯಾವ ಕಾರಣಕ್ಕೋ ಏನು ಈ ಇಬ್ಬರ ನಡುವೆ ವಿರಸ ಕಂಡುಬಂದಿದೆ. ಇದರಿಂದಾಗಿ ಪತ್ನಿಯನ್ನು ಬಿಟ್ಟ ಕಣ್ಣನ್ ಹಳ್ಳಿ ಬಿಟ್ಟು ಚೆನ್ನೈಗೆ ಹೋಗಿ ನೆಲೆಸಿದ್ದರು.
ದಂಪತಿಗಳ ವಿರಸ ಕಂಡ ಹಳ್ಳಿಯ ಜನರು ಕಣ್ಣನ್ ಗೆ ಬುದ್ಧಿವಾದ ಹೇಳಿ, ಪುನಃ ಹಳ್ಳಿಗೆ ಬಂದು ನೆಲೆಸುವಂತೆ ಹೇಳಿದ್ದಾರೆ. ನಂತರ ಹಳ್ಳಿಗೆ ಬಂದ ಕಣ್ಣನ್ ತಮ್ಮ ತಂದೆ-ತಾಯಿ ಮನೆಗೆ ಬಂದು ನೆಲೆಸಿದ್ದಾರೆ. ಕಣ್ಣನ್ ಊರಿಗೆ ಬರುವುದನ್ನೇ ಕಾದಿದ್ದ ಪಂಡೀಶ್ವರಿ, ಇಂದು ಬೆಳಗಿನ ಜಾವ ಇದ್ದಕ್ಕಿದ್ದಂತೆ ಕಣ್ಣನ್ ಇದ್ದ ಮನೆಯ ಹತ್ತಿರ ಬಂದು ಹೊರಾಂಗಣದಿಂದ ಮನೆಯ ಬಾಗಿಲನ್ನು ಹಾಕಿದ್ದಾಳೆ. ನಂತರ ಮನೆಗೆ ಹೊರಾಂಗಣದಿಂದಲೇ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿದ್ದಾಳೆ.
ಇದರ ಪರಿಣಾಮ ಮನೆಯ ಒಳಗಿದ್ದ ಕಣ್ಣನ್ ಹಾಗೂ ಅವರ ತಂದೆ ವೇಲು (35) ಪಚ್ಯಾಮಲ್ (50), ತಂಗಿ ಸುಗಂಧಿ (35), ಸುಗಂಧಿ ಮಕ್ಕಳಾದ ಸಂಗೀತಾ (17), ಸಂಗೀತ್ (12) ಎಲ್ಲರೂ ಸಜೀವದಹನವಾಗಿದ್ದಾರೆ.
ಸಜೀವ ದಹವವಾದ ಕಣ್ಣನ್ ತಂಗಿ ಸುಗಂಧಿ ಮಗ ವಿನೀತ್ (13) ಪ್ರಾಣಾಪಾಯದಿಂದ ಪಾರಾಗಿದ್ದು, ಮದುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಬಳಿಕ ಪಂಡೀಶ್ವರಿ ಪೊಲೀಸರಿಗೆ ಶರಣಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.