ದೇಶ

ಪ್ರಧಾನಮಂತ್ರಿ ಕಚೇರಿಯ ಘನತೆ ಮರುಕಳಿಸಿದೆ: ಅರುಣ್ ಜೇಟ್ಲಿ

Sumana Upadhyaya

ನವದೆಹಲಿ:ಯುಪಿಎ, ಆಡಳಿತಾವಧಿಯಲ್ಲಿ ಕೇಂದ್ರದಲ್ಲಿ ಪ್ರತ್ಯೇಕ ಅಧಿಕಾರ ಕೇಂದ್ರವನ್ನು ಹುಟ್ಟುಹಾಕಿತ್ತು. ಆದರೆ ಎನ್ ಡಿಎ ಸರ್ಕಾರ ಕಳೆದ ಒಂದು ವರ್ಷದಲ್ಲಿ ಪ್ರಧಾನಮಂತ್ರಿ ಕಚೇರಿಯ ವಿಶ್ವಾಸಾರ್ಹತೆ, ಘನತೆ ಮತ್ತು ನಿಲುವುಗಳನ್ನು ಮರು ಸ್ಥಾಪಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ರಾಜಕೀಯದಲ್ಲಿ ಬಿಜೆಪಿಯು ಕೇಂದ್ರಬಿಂದುವಾಗಿದೆ.ರಾಷ್ಟ್ರದ ರಾಜಕೀಯ ಈಗ ಪರ ಬಿಜೆಪಿ ಮತ್ತು ಬಿಜೆಪಿ ವಿರೋಧಿ ಮಾರ್ಗದರ್ಶನ ಮಾಡುತ್ತದೆ ಎಂದರು.

ಎನ್ ಡಿಎಯ ಮೊದಲ ವರ್ಷಾಚರಣೆ ಅಂಗವಾಗಿ ಕೇಂದ್ರ ಹಾಗೂ ರಾಜ್ಯಗಳ ಸಚಿವರುಗಳು, ಪಕ್ಷದ ಸಂಸದರು, ಪದಾಧಿಕಾರಿಗಳು ದೇಶಾದ್ಯಂತ ಬೃಹತ್ ರಾಲಿಗಳನ್ನು,ಸಭೆಗಳನ್ನು ನಡೆಸಿ ಸರ್ಕಾರದ ಅಜೆಂಡಾಗಳು, ಯೋಜನೆಗಳನ್ನು ಜನತೆಗೆ ಸಾರಲಿದ್ದಾರೆ ಎಂದು ಹೇಳಿದರು.

ಕೆಲವು ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಕೇಳಿದಾಗ, ಅಂತಹ ಹೇಳಿಕೆಗಳನ್ನು ನೀಡಬಾರದೆಂದು ಸೂಚಿಸಲಾಗಿದೆ. ಕೆಲವು ಚರ್ಚ್ ಗಳ ಮೇಲೆ ದಾಳಿ ನಡೆದಿರುವ ಪ್ರಕರಣಗಳು ಕಾನೂನು-ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯಗಳಾಗಿದ್ದು, ಈಗ ಅಂತಹ ಧಾರ್ಮಿಕ ಕೇಂದ್ರಗಳಿಗೆ ಭದ್ರತೆ ಒದಗಿಸಲಾಗಿದೆ ಎಂದರು.

ಯುಪಿಎ ಅಧಿಕಾರಾವಧಿಯಲ್ಲಿ ಪ್ರಧಾನಮಂತ್ರಿಗಳ ಸ್ಥಾನವನ್ನು ಮೊಟಕುಗೊಳಿಸಿ ಸರ್ಕಾರದ ಹೊರಗೆ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸಲಾಗಿತ್ತು. ಆದರೆ ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ನಾವು ಅದನ್ನು ಬದಲಿಸಿದೆವು. ಎನ್ ಡಿಎ ಮೈತ್ರಿಕೂಟದಲ್ಲಿ ಸರ್ಕಾರ ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಹೊಂದಾಣಿಕೆಯಿದ್ದು,ಎಲ್ಲರೂ ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ತ್ವರಿತ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಯೋಜನೆಗಳು ಬೇಗನೆ ಕಾರ್ಯರೂಪಕ್ಕೆ ಬರುತ್ತವೆ. ಸರ್ಕಾರದ ಗುರಿಯಲ್ಲಿ ಸ್ಪಷ್ಟತೆಯಿದೆ.ಭ್ರಷ್ಟಾಚಾರದ ಬದಲಿಗೆ ಪಾರದರ್ಶಕ ಆಡಳಿತ ಬಂದಿರುವುದು ಎನ್ ಡಿಎ ಸರ್ಕಾರದ ಸಾಧನೆ; ಸ್ನೇಹ ಬಂಡವಾಳಶಾಹಿಯ ಬದಲಾಗಿ ಉದಾರ ನೀತಿ ಆಧಾರಿತ ಆಡಳಿತ ಬಂದಿರುವುದು ಸರ್ಕಾರದ ಸಾಧನೆ ಎಂದು ಅರುಣ್ ಜೇಟ್ಲಿ ನುಡಿದರು.

SCROLL FOR NEXT