ನವದೆಹಲಿ: ಬಹುಕೋಟಿ ಬೋಫೋರ್ಸ್ ಫಿರಂಗಿ ಖರೀದಿ ಹಗರಣ ಕೇವಲ ಮಾಧ್ಯಮ ಸೃಷ್ಟಿಯಷ್ಟೇ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಕಳೆದವಾರ ಸ್ವೀಡಿಶ್ ಪತ್ರಿಕೆಯೊಂದರ ಸಂಪಾದಕರಿಗೆ ಸಂದರ್ಶನ ನೀಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬೋಫೋರ್ಸ್ ಹಗರಣವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಬೋಫೋರ್ಸ್ ಫಿರಂಗಿ ಖರೀದಿ ಪ್ರಕ್ರಿಯೆಯನ್ನು ಭಾರತದ ಯಾವ ನ್ಯಾಯಾಲಯವೂ ಹಗರಣ ಎಂದು ಹೇಳಿಲ್ಲ. ಇದು ಕೇವಲ ಭಾರತೀಯ ಮಾಧ್ಯಮಗಳ ಪ್ರಯೋಗ ಅಷ್ಟೇ ಎಂದು ಹೇಳಿದ್ದಾರೆ.
"ಬೋಫೋರ್ಸ್ ಫಿರಂಗಿ ಖರೀದಿ ಸಮಯದಲ್ಲಿ ನಾನು ರಕ್ಷಣಾ ಸಚಿವನಾಗಿದ್ದೆ. ನನ್ನ ಎಲ್ಲ ಅಧಿಕಾರಿಗಳು ಮತ್ತು ಸೇನಾ ಅಧಿಕಾರಿಗಳು ಬೋಫೋರ್ಸ್ ಸಂಸ್ಥೆಯ ಹಾವಿಟ್ಜರ್ ಫಿರಂಗಿಗಳು ಉನ್ನತಮಟ್ಟದ ಫಿರಂಗಿಗಳು ಎಂದು ಪ್ರಮಾಣ ಪತ್ರ ನೀಡಿದ ಬಳಿಕವೇ ನಾವು ಖರೀದಿಗೆ ಮುಂದಾಗಿದ್ದೆವು. ಇಂದಿಗೂ ನಮ್ಮ ಸೇನೆಯಲ್ಲಿರುವ ಉತ್ಕೃಷ್ಟ ಮಟ್ಟದ ಫಿರಂಗಿಗಳ ಪೈಕಿ ಬೋಫೋರ್ಸ್ ಫಿರಂಗಿಗಳು ಕೂಡ ಒಂದು. ಇಂದಿಗೂ ಭಾರತೀಯ ಸೇನೆ ಈ ಫಿರಂಗಿಗಳನ್ನು ಬಳಕೆ ಮಾಡುತ್ತಿವೆ. ನೀವು ಹಗರಣ ಎಂದು ಮಾತನಾಡುತ್ತಿರುವ ವಿಚಾರ ಕೇವಲ ಮಾಧ್ಯಮ ಸೃಷ್ಟಿಯಾಗಿದ್ದು, ಈ ಪ್ರಕರಣವನ್ನು ಹಗರಣ ಎಂದು ಹೇಳಬಾರದು" ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಇನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಂದರ್ಶನ ಕುರಿತಂತೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದ್ದು, ರಾಷ್ಟ್ರಪತಿಗಳ ಹೇಳಿಕೆ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ. ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಾತನಾಡಿ, ಪ್ರಣಬ್ ಮುಖರ್ಜಿ ಅವರ ಹೇಳಿಕೆ ಕುರಿತಂತೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
1986ರಲ್ಲಿ ಭಾರತ ಸರ್ಕಾರ ಸ್ವಿಟ್ಜರ್ ಲೆಂಡ್ ಮೂಲದ ಬೋಫೋರ್ಸ್ ಸಂಸ್ಥೆಯೊಂದಿಗೆ ಸುಮಾರು 1,500 ಕೋಟಿ ಮೌಲ್ಯದ ಫಿರಂಗಿಗಳ ಖರೀದಿ ವ್ಯವಹಾರ ಮಾಡಿಕೊಂಡಿತ್ತು. ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬೋಫೋರ್ಸ್ ಸಂಸ್ಥೆಯಿಂದ ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದೆ ಎಂದು ಸ್ವೀಡಿಶ್ ಮಾಧ್ಯಮಗಳು ಆರೋಪ ಮಾಡಿದ್ದವು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಸಚಿವರು ಮತ್ತು ಕೆಲ ಪ್ರಭಾವಿ ರಾಜಕಾರಣಿಗಳು ಈ ವ್ಯವಹಾರದಲ್ಲಿ ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಂದು ಪ್ರಣಬ್ ಮುಖರ್ಜಿ ಅವರು ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ರಕ್ಷಣಾ ಇಲಾಖೆಯನ್ನು ಕೂಡ ವಹಿಸಿಕೊಂಡಿದ್ದರು. ಭಾರತದಲ್ಲಿಯೂ ಮಾರ್ಧನಿಸಿದ್ದ ಈ ಹಗರಣದಿಂದಾಗಿ 1989ರಲ್ಲಿ ನಡೆದ ಸಾರ್ವಜನಿಕ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲು ಕಂಡಿತ್ತು.