ಹೈದರಾಬಾದ್: ದಕ್ಷಿಣ ಭಾರತದ ತೆಲಂಗಾಣ ಹಾಗೂ ಆಂಧ್ರಪದೇಶದಾದ್ಯಂತ ಬಿಸಿಲಿನ ಮರಣ ಮೃದಂಗ ಮಂದುವರೆದಿದ್ದು, ಸಾವಿನ ಸಂಖ್ಯೆ 800ಕ್ಕೇರಿದೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಈ ಎರಡೂ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು, ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಬಿಸಿಲಿನ ತಾಪಮಾನ ಇನ್ನೂ ಎರಡರಿಂದ ಮೂರು ದಿನಗಳವರೆಗೂ ಮುಂದುವರೆಯಲಿದ್ದು, ತದನಂತರ ಭಾರಿ ಮಳೆ ಸುರಿಯುವ ಸಂಭವವಿದೆ ಎಂದು ವಿಶಾಖಪಟ್ಟಣ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ಬಿಸಿಲಿನ ತಾಪಮಾನಕ್ಕೆ ಈಗಾಗಲೇ ನಲುಗಿ ಹೋಗಿರುವ ಆಂಧ್ರಪ್ರದೇಶದ ಜನತೆಗೆ ಸಹಾಯ ಹಸ್ತ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಜನತೆಗೆ ಕುಡಿಯುವ ನೀರು ಮತ್ತು ಮಜ್ಜಿಗೆ ವಿತರಿಸುವಂತೆ ಆದೇಶ ನೀಡಿದ್ದಾರೆ. ಅಲ್ಲದೆ, ಬಿಸಿಲಿನ ತಾಪ ಹೆಚ್ಚಿರುವುದರಿಂದ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4.30 ರವರೆಗೆ ಹೊರ ಬರದಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.