ನವದೆಹಲಿ: ಪ್ರಧಾನಮಂತ್ರಿ ಮೋದಿ ಮತ್ತು ಕೇಂದ್ರ ಸರ್ಕಾರದ ನೀತಿ ವಿರುದ್ಧ ದ್ವೇಷ ಬಿತ್ತುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮದ್ರಾಸ್ ಐಐಟಿ ಕಾಲೇಜು ವಿದ್ಯಾರ್ಥಿ ಸಂಘಟನೆಗೆ ನಿಷೇಧ ಹೇರಿರುವುದಕ್ಕೆ ಹಲವು ವಿರೋಧಗಳು ವ್ಯಕ್ತವಾಗಿದ್ದು, ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ನಿವಾಸದೆದುರು ಶುಕ್ರವಾರ ಪ್ರತಿಭಟನೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ವಿದ್ಯಾರ್ಥಿ ಸಂಘಟನೆಗೆ ನಿಷೇಧ ಹೇರಿರುವುದರ ಕುರಿತಂತೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಯುವ ಕಾಂಗ್ರೆಸ್ ನ ಕಾರ್ಯಕರ್ತರು ನವದೆಹಲಿಯಲ್ಲಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ಮನೆಯೆದುರು ಧರಣಿಗಿಳಿದಿರುವುದಾಗಿ ತಿಳಿದುಬಂದಿದೆ.
ಸಾಮಾನ್ಯ ಮನುಷ್ಯನ ಮೇಲೆ ಪರಿಣಾಮ ಬೀರುವ ಸಾಂಸ್ಕೃತಿಕ ಮತ್ತು ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳನ್ನು ಚರ್ಚಿಸಲು ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್ ಅಂತರ್ಜಾಲದಲ್ಲಿ ಚರ್ಚಾ ವೇದಿಕೆಯನ್ನು ಸ್ಥಾಪಿಸಿತ್ತು. ಈ ಚರ್ಚಾ ವೇದಿಕೆಯಲ್ಲಿ ನರೇಂದ್ರ ಮೋದಿ ಹಾಗೂ ಕೇಂದ್ರ ನೀತಿ ಕುರಿತಂತೆ ಅಪಪ್ರಚಾರ ಮಾಡುತ್ತಿರುವುದಾಗಿ ಮಾನವ ಸಂಪನ್ಮೂಲ ಇಲಾಖೆಗೆ ಅನಾಮಧೇಯ ಪತ್ರವೊಂದು ಬರೆಯಲಾಗಿತ್ತು. ಪತ್ರದಲ್ಲಿ ಮೋದಿ ಸರ್ಕಾರದ ವಿರುದ್ಧ ಭಾಷಣ ಮಾಡಿರುವ ಕರಪತ್ರವೊಂದನ್ನು ಲಗತ್ತಿಸಲಾಗಿತ್ತು.
ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಮಾನವ ಸಂಪನ್ಮೂಲ ಇಲಾಖೆಯು ಪ್ರತಿಕ್ರಿಯೆ ನೀಡುವಂತೆ ಮದ್ರಾಸ್ ಐಐಟಿ ಕಾಲೇಜಿಗೆ ಸೂಚನೆ ನೀಡಿತ್ತು. ಇಲಾಖೆ ಸೂಚನೆಯಂತೆ ವಿದ್ಯಾರ್ಥಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಂಡಿದ್ದ ಐಐಟಿ ಮದ್ರಾಸ್ ಕಾಲೇಜು, ವಿದ್ಯಾರ್ಥಿ ಸಂಘಟನೆಗೆ ಇಂದು ನಿಷೇಧ ಹೇರಿತ್ತು.