ನವದೆಹಲಿ: ದೆಹಲಿ ಆಡಳಿತಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ಸಿಎಂ ಅರವಿಂದ ಕೇಜ್ರಿವಾಲ್ ನಡುವಿನ ಮತ್ತೊಂದು ಸುತ್ತಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಒಂದೆಡೆ, ದೆಹಲಿಯಲ್ಲಿ ಅಧಿಕಾರಿಗಳ ನೇಮಕ, ವರ್ಗಾವಣೆ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ನಿರ್ಧಾರವೇ ಅಂತಿಮ ಎಂಬ ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯನ್ನು ಪ್ರಶ್ನಿಸಿ ಗುರುವಾರ ಕೇಜ್ರಿವಾಲ್ ಸರ್ಕಾರ ದೆಹಲಿ ಹೈಕೋರ್ಟ್ ಮೊರೆಹೋಗಿದೆ.
ಮತ್ತೊಂದೆಡೆ, ದೆಹಲಿಯಲ್ಲಿ ಪೊಲೀಸರನ್ನು ಬಂಧಿಸುವ ಅಧಿಕಾರ ಭ್ರಷ್ಟಾಚಾರ ನಿಗ್ರಹ ದಳಕ್ಕಿದೆ ಎಂಬ ದೆಹಲಿ ಹೈಕೋರ್ಟ್‍ನ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಎರಡೂ ನ್ಯಾಯಾಲಯಗಳಲ್ಲಿ ಎರಡೂ ಅರ್ಜಿಗಳ ವಿಚಾರಣೆ ಶುಕ್ರವಾರ ನಡೆಯಲಿದೆ.
ಕೇಂದ್ರ ಸರ್ಕಾರದ ಅರ್ಜಿಯ ವಿಚಾರದ ಬಗ್ಗೆ ಪ್ರಸ್ತಾಪಿಸಿದ, ಹೆಚ್ಚುವರಿ ಸಾಲಿಸಿಟರ್ ಜನರಲ್ ಮನೀಂದರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಹೈಕೋರ್ಟ್‍ನ ಸೂಚನೆಯು ಸಂಪೂರ್ಣ ಅನಿಶ್ಚಿತತೆಯಿಂದ ಕೂಡಿದ್ದು, ರಾಷ್ಟ್ರ ರಾಜಧಾನಿಯ ದೈನಂದಿನ ಆಡಳಿತವನ್ನೇ ಕ್ಲಿಷ್ಟಗೊಳಿಸಿದೆ ಎಂದಿದೆ.
ಗೃಹ ಕಾರ್ಯದರ್ಶಿ- ಜಂಗ್ ಭೇಟಿ
ದೆಹಲಿಯಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಗುರುವಾರ ಕೇಂದ್ರಗೃಹ ಕಾರ್ಯದರ್ಶಿ ಎಲ್.ಸಿ. ಗೋಯಲ್‍ರನ್ನು ಭೇಟಿಯಾಗಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯ, ಎಸ್‍ಎಲ್‍ಪಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರ ಸರ್ಕಾರ ನಿಲುವುಗಳೇನು ಎಂಬೆಲ್ಲ ವಿಚಾರಗಳ ಬಗ್ಗೆ ಅವರು ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ, ಗೋಯಲ್ ಅವರು ಮಾತ್ರ ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.
ಮಮತಾ, ನಿತೀಶ್ ನೆರವು ಕೋರಿದ ಆಪ್
ಕೇಂದ್ರದೊಂದಿಗೆ ಕಚ್ಚಾಟಕ್ಕೆ ಬಿದ್ದಿರುವ ಅರವಿಂದ ಕೇಜ್ರಿವಾಲ್, ದೆಹಲಿಯ ಆಡಳಿತಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ``ದೇಶದ ಒಕ್ಕೂಟ ವ್ಯವಸ್ಥೆ ಮೇಲಾದ ದಾಳಿ'' ಎಂದು ವ್ಯಾಖ್ಯಾನಿಸಿದ್ದಾರೆ.
ಜತೆಗೆ, ಮುಂಬರುವ ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಸಂಸತ್‍ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಕೇಜ್ರಿ ಅವರು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ಬೆಂಬಲ ಪಡೆಯುಲು ನಿರ್ಧರಿಸಿದ್ದಾರೆ.