ನವದೆಹಲಿ: ಭಯೋತ್ಸಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಮತ್ತು ರಾಷ್ಟ್ರೀಯ ಸ್ವಯಂಸೇವಕ್ ಸಂಘ(ಆರ್ ಎಸ್ ಎಸ್)ಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ಇತಿಹಾಸ ತಜ್ಞ ಇರ್ಫಾನ್ ಹಬೀಬ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ 'ಪ್ರತಿರೋಧ್' ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಂಘಟನೆಯನ್ನು ಭಯೋತ್ಪಾದನಾ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗೆ ಹೋಲಿಸಿದ್ದಾರೆ.
ಕೋಮುವಾದ ಹಿಂದಿನಿಂದಲೂ ಇಲ್ಲಿಯವರೆಗೆ ಅಸ್ತಿತ್ವದಲ್ಲಿದೆ. ಆದರೆ, ಈಗ ನನ್ನಂತವರು ಇದರ ಬಗ್ಗೆ ಹೆಚ್ಚು ತಲೆಕೊಡಿಸಿಕೊಳ್ಳುವಂತಹ ಸಂದರ್ಭ ಎದುರಾಗಿದೆ. ಕೋಮುಗಲಭೆಯ ಹಿಂದೆ ಒಂದಲ್ಲ ಒಂದು ಕಡೆ ಕೈವಾಡ ಇದ್ದೇ ಇರುತ್ತದೆ. ಇಂತಹವರೇ ಅಧಿಕಾರಿದಲ್ಲಿದ್ದಾಗ ಬುದ್ಧಿಜೀವಿಗಳು ಕೂಡ ಸುಮ್ಮನೇ ಕುಳಿತಿರುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಆಡೋಲ್ಫ್ ಹಿಟ್ಲರ್ ನಿಂದ ಆರ್‌ಎಸ್‌ಎಸ್ ಪ್ರಭಾವಿತಗೊಂಡಿತ್ತು. ಆರ್‌ಎಸ್‌ಎಸ್ ನಿಯಂತ್ರಣದಲ್ಲಿ ಈಗಿನ ಸರ್ಕಾರ ನಡೆಯುತ್ತಿದೆ. ಹಾಗಾಗಿ, ಕೋಮುಗಲಭೆ ಬಗ್ಗೆ ಈಗಿನ ಸರ್ಕಾರ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದ ಅವರು, ಅಟಲ್ ಬಿಹಾರಿ ವಾಜಪೇಯಿಗಿಂತ ಪ್ರಧಾನಿ ನರೇಂದ್ರ ಮೋದಿ ಕೆಟ್ಟವರಾಗಿದ್ದಾರೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.