ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗಳ ಸಾಮರ್ಥ್ಯವನ್ನು ಉದ್ಯಮ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಬಳಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ.
ಭಾರತ ಸರ್ಕಾರದ ಮಹತ್ವಾಕಾಂಕ್ಷೆಯಾದ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಐಐಟಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಇರುವಂತೆ ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕಾಗಿ ಐಐಟಿಗಳಿಗೆ ವಾರ್ಷಿಕ 250 ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ. ಐಐಟಿಗಳಿಗೆ ಮೇಕ್ ಇನ್ ಇಂಡಿಯಾ ಅಭಿಯಾನದೊಂದಿಗೆ ಸಂಪರ್ಕ ಕಲ್ಪಿಸುವುದರಿಂದ ಉನ್ನತ ಸಂಶೋಧನೆ ಹಾಗೂ ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಆವಿಷ್ಕಾರಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಸಾಧ್ಯವಾಗುತ್ತದೆ.
ಶೈಕ್ಷಣಿಕ-ಉದ್ಯಮ ಸಂಪರ್ಕ ಹೆಚ್ಚಿಸುವ ಉದ್ದೇಶದಿಂದ ಭಾರತ ಸರ್ಕಾರ ಐಐಟಿಗಳಿಗೆ ಮೇಕ್ ಇನ್ ಇಂಡಿಯಾ ಅಭಿಯಾನದೊಂದಿಗೆ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ಸರ್ಕಾರದ ಪ್ರಸ್ತಾವನೆಯಲ್ಲಿ ನಿರ್ದಿಷ್ಟ ಕಾಲಮಿತಿಯೊಳಗೆ ಯೋಜನೆಗಳನ್ನು ಮುಕ್ತಾಯಗೊಳಿಸಲು ಐಐತಿಗಳು ಬದ್ಧವಾಗಿರುವುದು ಸೇರಿದಂತೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ. 500 ಕೋಟಿಗಿಂತ ಹೆಚ್ಚು ಮೌಲ್ಯದ ಯೋಜನೆಗಳನ್ನು ಐಐಟಿಗಳು ನಿರ್ವಹಿಸುವುದರಿಂದ ಉದ್ಯಮ ಕ್ಷೇತ್ರದಿಂದ ಶೇ.25 ರಷ್ಟು ಯೋಜನಾ ವೆಚ್ಚ ನೀಡಲಾಗುವುದು ಎಂದು ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ. ಸದ್ಯಕ್ಕೆ ಇದೊಂದು ಪ್ರಸ್ತಾವನೆಯಾಗಿದ್ದು, ಈ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧ್ಯಕ್ಷತೆಯಲ್ಲಿ ನ.4 ರಿಂದ ನಡೆಯಲಿರುವ ವಿಸಿಟರ್ಸ್ ಕಾನ್ಫರೆನ್ಸ್ ನಲ್ಲಿ ಚರ್ಚೆ ನಡೆಯಲಿದೆ. ಈ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗವಹಿಸಲಿದ್ದಾರೆ.
ಐಐಟಿಗಳನ್ನೊಳಗೊಂಡಿರುವ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸುವುದರಿಂದ ಐಐಟಿಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯ, ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಐಐಟಿಗಳನ್ನೊಳಗೊಂಡ ಯೋಜನೆಗಳಿಗೆ ಎಲ್ಲಾ ಐಐಟಿಗಳ ಆಡಳಿತ ಕೇಂದ್ರಗಳು ಸಮನ್ವಯ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.
ಅಂತರಿಕ್ಷಯಾನ ಪ್ರೋಗ್ರಾಂ ನಲ್ಲಿ ಪ್ರಸಿದ್ಧಿ ಪಡೆದು, ಈ ವಿಭಾಗದಲ್ಲಿ ಅತ್ಯಂತ ಹೆಚ್ಚಿನ ಕೌಶಲ್ಯಹೊಂದಿರುವ ಬಾಂಬೆ ಐಐಟಿಯನ್ನು ಅಂತರಿಕ್ಷಯಾನ ಪ್ರೋಗ್ರಾಂ ಗೆ ಸಂಬಂಧಿಸಿದ ಯೋಜನೆಗಳಿಗಾಗಿಯೆ ಬಳಸಿಕೊಳ್ಳಲಾಗುತ್ತದೆ. ಕಾನ್ಪುರ ಐಐಟಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಹೆಚ್ಚಿನ ಖ್ಯಾತಿ ಪಡೆದಿದ್ದು, ಅದೇ ವಿಭಾಗಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕಾನ್ಪುರಕ್ಕೆ ನೀಡಲಾಗುತ್ತದೆ ಎಂದು ಹೆಚ್.ಆರ್.ಡಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.