ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದ ನ್ಯಾಯವಾದಿ ಸಿರಾಜಿನ್ ಭಾಷಾ ಸಕಾಲದಲ್ಲಿ ಪ್ರತಿಪ್ರಮಾಣ ಪತ್ರ ಸಲ್ಲಿಸದ ಕಾರಣ ರು.15 ಸಾವಿರ ದಂಡ ವಿಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಜತೆಗೆ ಪ್ರತಿ ಪ್ರಮಾಣ ಪತ್ರ ಸಲ್ಲಿಸಲು ಇನ್ನೂ ಆರು ವಾರಗಳ ಕಾಲಾವಕಾಶ ನೀಡಿದೆ.
ಸಿರಾಜಿನ್ ಬಾಷಾ ನೀಡಿದ ದೂರಿನ ಆಧಾರದ ಮೇಲೆ ತಮ್ಮ ವಿರುದ್ಧದ ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತ ತನಿಖೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಯಡಿಯೂರಪ್ಪ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಯಡಿಯೂರಪ್ಪರ ಮೇಲ್ಮನವಿಗೆ ಉತ್ತರಿಸುವಂತೆ ಸಿರಾಜಿನ್ ಭಾಷಾಗೆ ಸುಪ್ರೀಂ ಸೂಚಿಸಿತ್ತು. ಆದರೆ, ಸಿರಾಜಿನ್ ಉತ್ತರಿಸಿರಲಿಲ್ಲ. ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಟಿ.ಎಸ್.ಠಾಕೂರ್ ನೇತೃತ್ವದ ನ್ಯಾಯಪೀಠವು ಸಕಾಲದಲ್ಲಿ ಉತ್ತರಿಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ದಂಡ ವಿಧಿಸಿತು. ಜತೆಗೆ ಉತ್ತರಿಸಲು ಇನ್ನೂ ಆರು ವಾರಗಳ ಕೊನೆ ಕಾಲಾವಕಾಶ ನೀಡಿತು.
ಸಿರಾಜಿನ್ ಬಾಷಾ ನೀಡಿದ ದೂರನ್ನು ದಾಖಲಿಸಿದ್ದ ಲೋಕಾಯುಕ್ತ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಕರ್ನಾಟಕ ಹೈ ಕೋರ್ಟಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಯಡಿಯೂರಪ್ಪ ಸುಪ್ರೀಂನಲ್ಲಿ ತಮ್ಮ ವಿರುದ್ಧದ ಲೋಕಾಯುಕ್ತ ತನಿಖೆ ರದ್ದು ಪಡಿಸುವಂತೆ ಮನವಿ ಮಾಡಿದ್ದರು. ಈ ಸಂಬಂಧ 2014 ಫೆಬ್ರವರಿ 10 ರಂದು ಸುಪ್ರೀಂ ಕೋರ್ಟ್ ಸಿರಾಜಿನ್ ಭಾಷಾಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದ ನ್ಯಾಯಪೀಠ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.