ನರೇಂದ್ರ ಮೋದಿ- ನಿತೀಶ್ ಕುಮಾರ್
ನವದೆಹಲಿ/ ಪಟನಾ: ಬಿಹಾರದಲ್ಲಿ ನಡೆಯುತ್ತಿರುವ `ಗೋಮಾಂಸ ಜಾಹೀರಾತಿನ ರಾಜಕೀಯ'ದ ಫಲವಾಗಿ ಚುನಾವಣಾ ಆಯೋಗ ತನ್ನ ಅನುಮತಿಯಿಲ್ಲದೆ ಯಾವುದೇ ಜಾಹೀರಾತು ಪ್ರಕಟಿಸದಂತೆ ರಾಜಕೀಯ ಪಕ್ಷಗಳಿಗೆ ಆದೇಶ ನೀಡಿದೆ.
ಇದೇ ಮೊದಲ ಬಾರಿಗೆ ಆಯೋಗವು ಈ ಬಗೆಯ ಸೆನ್ಸಾರ್ ವಿಧಿಸಿದೆ. ಅದರಂತೆ, ಗುರುವಾರ ನಡೆಯಲಿರುವ ಕೊನೇ ಹಂತದ ಮತದಾನಕ್ಕೆ ಮುನ್ನ ಯಾವುದೇ ಜಾಹೀರಾತು ಆಯೋಗದ ಸೆನ್ಸಾರ್ ಇಲ್ಲದೆ ಎಲ್ಲೂ ಪ್ರಕಟವಾಗು ವಂತಿಲ್ಲ. ಬಿಜೆಪಿಯ `ಗೋಮಾಂಸ' ಜಾಹಿರಾತಿನ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಪ್ರತಿ ಪಕ್ಷಗಳು ಆಯೋಗದ ಮೆಟ್ಟಿಲೇರಿದ ಬಳಿಕ ಆಯೋಗದ ಈ ನಡೆ ಪ್ರಕಟವಾಗಿದೆ.
ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯ ಬಗ್ಗೆ ಸಹೋದ್ಯೋಗಿಗಳು ಮತ್ತು ಮಿತ್ರಪಕ್ಷಗಳು ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ನಿತೀಶ್ ಮೌನ ತಾಳಿದ್ದು, ಆದ್ದರಿಂದ ಅವರೂ ಈ ಅಭಿಪ್ರಾಯಗಳನ್ನು ಸಮರ್ಥಿಸುತ್ತಿದ್ದಾರೆ ಎಂಬ ಅರ್ಥದ ಜಾಹೀರಾತನ್ನು ಬಿಜೆಪಿ ಮಂಗಳವಾರ ಪ್ರಕಟಿಸಿತ್ತು. ಬಿಜೆಪಿ ಜಾಹೀರಾತಿನಲ್ಲಿ ಒಬ್ಬಾಕೆ ಸ್ತ್ರೀ ಒಂದು ಗೋವನ್ನು ತಬ್ಬಿಕೊಂಡಿರುವ ಚಿತ್ರವಿದೆ.
ಜತೆಗೆ ಆರ್‍ಜೆಡಿ ನಾಯಕ ಲಾಲು, ಸಹೋದ್ಯೋಗಿ ರಘುವಂಶ ಪ್ರಸಾದ್ ಸಿಂಗ್, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ವಿವಾದಾತ್ಮಕ ಹೇಳಿಕೆಗಳನ್ನು ಅಚ್ಚುಮಾಡಿ, ಈ ಹೇಳಿಕೆಗಳಿಗೆ ನಿತೀಶ್ ಸಮ್ಮತಿಯಿದೆಯೇ ಎಂದು ಪ್ರಶ್ನಿಸಲಾಗಿತ್ತು. ಇದರಿಂದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಕೆರಳಿದ್ದು, ಇದು ಮತೀಯ ದ್ವೇಷ ಹರಡುವ ಮೂಲಕ ಚುನಾವಣೆ ಧ್ರುವೀಕರಣಾ ಯತ್ನ ಎಂದು ದೂರಿವೆ.