ಗುವಾಹತಿ: ಅಸ್ಸಾಂನ ಒಂಬತ್ತು ಕಾಂಗ್ರೆಸ್ ಶಾಸಕರು ಶುಕ್ರವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರಿದ್ದು, ಕಾಂಗ್ರೆಸ್ ನೇತೃತ್ವದ ತರುಣ್ ಗೊಗೊಯ್ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇಂದು ಕಾಂಗ್ರೆಸ್‌ನಿಂದ ವಲಸೆಬಂದ ಒಂಬತ್ತು ಶಾಸಕರಿಗೆ ಅದ್ಧೂರಿ ಸ್ವಾಗತ ನೀಡಿದೆ.
ಬಿಜೆಪಿ ಸೇರುವ ಸಂಬಂಧ ಈ ಒಂಬತ್ತು ಶಾಸಕರು ನಿನ್ನೆ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ್ ಸೊನೊವಾಲ್ ಅವರೊಂದಿಗೆ ಮಾತುಕತೆ ನಡೆಸಿ, ಪಕ್ಷ ಸೇರ್ಪಡೆಯನ್ನು ಖಚಿತಪಡಿಸಿದ್ದರು.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಈ ಒಂಬತ್ತು ಶಾಸಕರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿತ್ತು. ಇದೀಗ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ಶಾಸಕರಾದ ಬೋಲಿನ್ ಚೇಟಿಯಾ, ಪ್ರದಾನ್ ಬುರವಾ, ಪಲ್ಲಾಬ್ ಲೋಚನ್ ದಾಸ್, ರಾಜೇನ್ ಭೋರ್ಥಾಕೂರ್, ಪಿಜೂಶ್ ಹಝಾರಿಕಾ, ಕ್ರಿಪಾಂತ್ ಮಲ್ಲಾಹ್, ಅಬು ಟಾಹೆರ್ ಬೆಪಾರಿ, ಬಿನಂದಾ ಸೈಕಿಯಾ ಮತ್ತು ಜಯಂತ ಮಲ್ಲಾಹ್ ಬರುವಾ ಬಿಜೆಪಿ ಸೇರಿದ್ದಾರೆ.