ನವದೆಹಲಿ: ಪಟೇಲ್ ಮೀಸಲಾತಿ ಸಮಿತಿ ಮುಖ್ಯಸ್ಥ ಹಾರ್ದಿಕ್ ಪೇಟಲ್ ವಿರುದ್ಧದ ದೇಶದ್ರೋಹ ಪ್ರಕರಣದ ತನಿಖೆ ಮುಂದುವರೆಸುವಂತೆ ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಮೀಸಲಾತಿ ಹೋರಾಟಗಾರನ ಜೈಲು ವಾಸ ಮುಂದಿನ ವರ್ಷ ಜನವರಿ 5ರವರೆಗೆ ಮುಂದುವರೆಯಲಿದೆ.
ತಮ್ಮ ವಿರುದ್ಧ ದಾಖಲಿಸಿರವ ದೇಶದ್ರೋಹ ಪ್ರಕರಣವನ್ನು ಪ್ರಶ್ನಿಸಿ ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ತನಿಖೆಯನ್ನು ಮುಂದುವರೆಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ.
ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜನವರಿ 5ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಹಾರ್ದಿಕ್ ಪಟೇಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸದಂತೆ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ. ಈ ವೇಳೆ ಒಂದೂವರೆ ತಿಂಗಳಲ್ಲಿ ಪ್ರಕರಣದ ತನಿಖೆ ಮುಗಿಸುವುದಾಗಿ ಗುಜರಾತ್ ಸರ್ಕಾರ ಕೋರ್ಟ್‌ಗೆ ತಿಳಿಸಿತು.
ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಹಾರ್ದಿಕ್ ಪಟೇಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪಟೇಲ್ ಸಮುದಾಯದವರು ಆತ್ಮಹತ್ಯೆ ಮಾಡಿಕೊಳ್ಳುವುದರ ಬದಲು ಪೊಲೀಸರನ್ನು ಹತ್ಯೆ ಮಾಡಬೇಕು ಎಂಬ ಪ್ರಚೋದನಕಾರಿ ಹೇಳಿಕೆಯನ್ನು ಹಾರ್ದಿಕ್ ಪಟೇಲ್ ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಕ್ಟೋಬರ್ 19ರಂದು ಹಾರ್ದಿಕ್ ಪಟೇಲ್ ರನ್ನು ಬಂಧಿಸಿದ್ದರು.