ದೇಶ

ಸರ್ಕಾರ ಜನಸಂಖ್ಯೆ ನಿಯಂತ್ರಣ ಯೋಜನೆಯನ್ನು ಪರಿಷ್ಕರಿಸಬೇಕು:ಆರ್ ಎಸ್ ಎಸ್

Sumana Upadhyaya

ನವದೆಹಲಿ: ದೇಶದಲ್ಲಿ ಮುಸಲ್ಮಾನರ ಮತ್ತು ಕ್ರಿಸ್ತಿಯನ್ನರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನಸಂಖ್ಯೆ ನಿಯಂತ್ರಣ ಯೋಜನೆಯನ್ನು ಪರಿಷ್ಕರಿಸುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಎರಡು ಸಮುದಾಯದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸಲು ಜನಸಂಖ್ಯಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಆರ್ ಎಸ್ ಎಸ್ ಮುಖಂಡ ಅಲೋಕ್ ಜೋಶಿ ತಿಳಿಸಿದರು.

ನಮ್ಮ ದೇಶದಲ್ಲಿ ಮುಸಲ್ಮಾನರ ಮತ್ತು ಕ್ರಿಸ್ತಿಯನ್ನರ ಸಂಖ್ಯೆ ಹೆಚ್ಚಲು ಮುಖ್ಯ ಕಾರಣ ಮೂರು. ಒಂದು, ಬಾಂಗ್ಲಾದೇಶದ ಅವ್ಯಾಹತ ಒತ್ತುವರಿ, ಎರಡನೆಯದ್ದು ಮತಾಂತರ ಮತ್ತು ಮೂರನೇ ಕಾರಣ ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸಲು ನಾವು ಯಾರೂ ಸಿದ್ಧವಿಲ್ಲದಿರುವುದು. ಅದಕ್ಕಾಗಿ ನಾವು ಎರಡು ಪ್ರಮುಖ ಬೇಡಿಕೆಗಳನ್ನು ಮಾಡುತ್ತಿದ್ದೇವೆ. ಜನಸಂಖ್ಯಾ ಯೋಜನೆಯನ್ನು ಸಮ ಪ್ರಮಾಣದಲ್ಲಿ ಪ್ರತಿಯೊಬ್ಬರೂ ಸ್ವೀಕರಿಸಲು ಪರಿಷ್ಕರಿಸಬೇಕು ಮತ್ತು ಒತ್ತುವರಿಯನ್ನು ನಿಯಂತ್ರಣಗೊಳಿಸಬೇಕು ಎಂದು ಜೋಶಿ ಹೇಳಿದರು.

ದಾಖಲೆಗಳ ಪ್ರಕಾರ ಸ್ವಾತಂತ್ರ್ಯ ನಂತರ ಭಾರತದಲ್ಲಿ ಹಿಂದೂ ಜನರ ಸಂಖ್ಯೆ ಶೇಕಡಾ 80ಕ್ಕಿಂತ ಕಡಿಮೆಯಾಗಿದೆ. ಈ ಬಗ್ಗೆ ಆರ್ ಎಸ್ ಎಸ್ ಕಳವಳ ವ್ಯಕ್ತಪಡಿಸುತ್ತಿದೆ. 1950ರಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡಾ 9.8ರಷ್ಟಿತ್ತು, 2011ರ ಹೊತ್ತಿಗೆ ಅದರ ಪ್ರಮಾಣ ಶೇಕಡಾ 14ರಷ್ಟಾಗಿದೆ. ನಮ್ಮ ದೇಶದ ಗಡಿ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಮಣಿಪುರಗಳಲ್ಲಿ ಕ್ರಿಸ್ತಿಯನ್ನರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. 2011ರಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡಾ 79.8ಕ್ಕೆ ಕುಸಿದಿದೆ. 2011ರಲ್ಲಿ ಹಿಂದೂ ಜನರ ಪ್ರಮಾಣ ಶೇಕಡಾ 80.5 ರಷ್ಟಿತ್ತು.

2001ರಲ್ಲಿ ಮುಸಲ್ಮಾನರ ಸಂಖ್ಯೆ ಶೇಕಡಾ 13.4ರಿಂದ ಶೇಕಡಾ 14.2ಕ್ಕೆ ಏರಿಕೆಯಾಗಿದೆ. ಕ್ರಿಸ್ತಿಯನ್ನರ ಸಂಖ್ಯೆ ಶೇಕಡಾ 2.3ರಷ್ಟಿದ್ದು, ಸಿಖ್ಖರ ಸಂಖ್ಯೆ ಶೇಕಡಾ 1.9ರಿಂದ ಶೇಕಡಾ 1.7ಕ್ಕೆ ಇಳಿದಿದೆ ಎಂದು ಜನಸಂಖ್ಯಾ ದಾಖಲೆಗಳು ಹೇಳುತ್ತವೆ.

SCROLL FOR NEXT