ದೇಶ

ಬಿಹಾರದಲ್ಲಿ ಬಿಜೆಪಿ ಸೋಲಿಗೆ 5 ಪ್ರಮುಖ ಕಾರಣ

Srinivasamurthy VN

ಪಾಟ್ನಾ: ಬಿಹಾರ ಚುನಾವಣಾ ಫಲಿತಾಂಶ ಬಿಜೆಪಿಯನ್ನು ಸ್ಥಬ್ದಗೊಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವದ ಹೊರತಾಗಿಯೂ ಚುನಾವಣಾ ಸೋಲು ಬಿಜೆಪಿಗೆ ನುಂಗಲಾರದ  ತುತ್ತಾಗಿ ಪರಿಣಮಿಸಿದೆ.

ಭಾರಿ ಪ್ರಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಹೊರತಾಗಿಯೂ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದೇಕೆ..? ಇಲ್ಲಿವೆ ಕೆಲ ಪ್ರಮುಖ ಶಂಕಿತ ಕಾರಣಗಳು..

1. ನಾಯಕತ್ವದ ಕೊರತೆ
ಬಿಹಾರ ಚುನಾವಣೆಯಲ್ಲಿ ಬಿಜೆಪಿ ಏಕ ವ್ಯಕ್ತಿ ಕೇಂದ್ರಿತ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ಅದಕ್ಕೆ ಹಿನ್ನಡೆಯನ್ನುಂಟು ಮಾಡಿರಬಹುದು. ಪ್ರಧಾನಿ ನರೇಂದ್ರ ಮೋದಿ ಪ್ರಭಾವವೊಂದನ್ನೇ  ನೆಚ್ಚಿಕೊಂಡ ಬಿಹಾರ ಬಿಜೆಪಿ ನಾಯಕರು, ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ತಲೆಯೇ ಕೆಡಿಸಿಕೊಳ್ಳಲಿಲ್ಲ. ಇಂತಹುದೇ ಪರಿಸ್ಥಿತಿ ಜೆಡಿಯು-ಆರ್ ಜೆಡಿ ನೇತೃತ್ವದ ಮೈತ್ರಿಕೂಟದಲ್ಲಿ ಇತ್ತು.  ನಿತೀಶ್ ಕುಮಾರ್ ನೇತೃತ್ವದಲ್ಲಿ ಮೈತ್ರಿಕೂಟ ಚುನಾವಣೆ ಎದುರಿಸಿತ್ತು.

ಆದರೆ ಇಲ್ಲಿನ ಸಣ್ಣ ವ್ಯತ್ಯಾಸವೆಂದರೆ, ಪ್ರಧಾನಿ ನರೇಂದ್ರ ಮೋದಿ ಚುನಾವಣೆಯ ಬಳಿಕ ದೆಹಲಿಗೆ ವಾಪಸಾಗುತ್ತಾರೆ.  ಮುಖ್ಯಮಂತ್ರಿಯಾದವರು ಮಾತ್ರ ಬಿಹಾರದಲ್ಲಿಯೇ ಉಳಿಯುತ್ತಾರೆ. ಹೀಗಾಗಿ ಬಿಹಾರ ಬಿಜೆಪಿ ಘಟಕ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಘೋಷಣೆ ಮಾಡದೇ ಇರುವುದು ಮತ್ತು ಬಿಹಾರದಲ್ಲಿ ಬಿಜೆಪಿಯ ಪ್ರಭಾವಿ ಮುಖಂಡನ ಕೊರತೆ ಅದಕ್ಕೆ ಹಿನ್ನಡೆಯಾಗಿರಬಹುದು.

2.ಮಹಾಘಟ್ ಬಂಧನ ಎಂಬ ಪರಿಕಲ್ಪನೆ
ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾದ ಮತ್ತೊಂದು ಪ್ರಮುಖ ಅಂಶವೆಂದರೆ ಅದು ಮಹಾಘಟಬಂಧನ ಎಂಬ ಮಹಾ ಮೈತ್ರಿಕೂಟ. ಇಷ್ಟು ದಿನ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದ ಜೆಡಿಯು,  ಆರ್ ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿದ್ದೇ, ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಏಕೆಂದರೆ ಈ ಪಕ್ಷಗಳ ಮೈತ್ರಿಯಿಂದಾಗಿ ಹರಿದು ಹಂಚಿಹೋಗುತ್ತಿದ್ದ  ಮತಗಳು ಒಂದೆಡೆ ಸೇರಿ ಮಹಾ ಮೈತ್ರಿಕೂಟಕ್ಕೆ ಜಯ ತಂದಿತ್ತಿದೆ. ಒಂದು ಕಾಲದ ಬದ್ಧ ವೈರಿಗಳಾಗಿದ್ದ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರು ಒಂದಾಗಿದ್ದು, ಬಿಜೆಪಿಗೆ  ಕುತ್ತಾಗಿ ಪರಿಣಮಿಸಿರಬಹುದು.

3.ಬಿಜೆಪಿ ನಾಯಕರ ಎಲ್ಲೆ ಮೀರಿದ ಮಾತುಗಳು
ಇನ್ನು ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲ ಬಿಜೆಪಿ ಮುಖಂಡರು ಆಡಿದ ಕೆಲ ಮಾತುಗಳು ಎಲ್ಲೆ ಮೀರಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಗೋಮಾಂಸ  ಭಕ್ಷಣೆ, ಗೋ ಮಾಂಸ ನಿಷೇಧ ಕುರಿತಂತೆ ಮತ್ತು ವಿಚಾರವಾದಿಗಳ ಮೇಲಿನ ಹಲ್ಲೆ ಇತ್ಯಾದಿ ವಿಚಾರಗಳ ಕುರಿತಂತೆ ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯಾನಾಥ್, ಗಿರಿರಾಜ್ ಸಿಂಗ್ ರಂತಹ ಬಿಜೆಪಿ ಮುಖಂಡರು ಆಡಿದ್ದ ಮಾತುಗಳು ಅಲ್ಪ ಸಂಖ್ಯಾತ ಮುಸ್ಲಿಂ ಮತದಾರರ ಮೇಲೆ ಗಾಢ ಪರಿಣಾಮ ಬೀರಿರಬಹುದು.

ಇನ್ನು ಮೀಸಲಾತಿ ಕುರಿತಂತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಹೇಳಿಕೆಗಳು ಭಾರಿ ಪ್ರಮಾಣದಲ್ಲಿ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಇದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಇದು ಹಿಂದುಳಿದ ಅಥವಾ ದಲಿತ ಮತ್ತು ಮಹಾದಲಿತ ವರ್ಗದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಅಲ್ಲದೆ ಮುಖಂಡರ ಈ ವಿವಾದಾತ್ಮಕ ಹೇಳಿಕೆಗಳು ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಯಿತು.

4.ಮತ ಹಂಚಿಕೆ ಲೆಕ್ಕಾಚಾರ ಮತ್ತು ಜಾತಿ ಗಣನೆ
ಪ್ರತೀ ಬಾರಿಯ ಚುನಾವಣೆಯಂತೆಯೇ ಈ ಬಾರಿಯ ಚುನಾವಣೆಯಲ್ಲಿಯೂ ರಾಜಕೀಯ ಪಕ್ಷಗಳು ಜಾತಿವಾರು ಮತ ಲೆಕ್ಕಾಚಾರದಲ್ಲಿ ತೊಡಗಿದ್ದವು. ಆದರೆ ಇದರಲ್ಲಿ ಬಹುಶಃ ಮಹಾಘಟ್  ಬಂಧನ ಮೈತ್ರಿಕೂಟ ಮಾತ್ರ ಯಶಸ್ವಿಯಾಗಿದೆ ಎಂದೆನಿಸುತ್ತದೆ. ಹಿಂದುಳಿದ ಜಾತಿ/ಪಂಗಡಗಳ ಮತಗಳು ಮಹಾಘಟ್ ಬಂಧನ ಮೈತ್ರಿಕೂಟದ ಪಾಲಾಗಿರಬಹದು. ಇನ್ನು ಜಾತಿವಾರು  ಲೆಕ್ಕಾಚಾರದ ಮತಗಳನ್ನು ಕೂಡ ಮೈತ್ರಿಕೂಟ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಬಿಜೆಪಿಗೆ ಮುಳುವಾಗಿ ಪರಿಣಮಿಸಿತು.

ಈ ವಿಚಾರಕ್ಕೆ ಬಂದರೆ ಬಿಜೆಪಿ ಈ ಕ್ಷೇತ್ರದಲ್ಲಿ ಸಾಕಷ್ಟು ಮತಗಳನ್ನು  ಪಡೆಯುವ ಅವಕಾಶವಿತ್ತು. ಜೆಡಿಯು ಪಕ್ಷದಲ್ಲಿದ್ದ ಮಾಜಿ ಮುಖ್ಯಮಂತ್ರಿ ಜೀತನ್ ರಾಂ ಮಾಂಜಿ ಅವರ ಹಿಂದೂಸ್ತಾನ್ ಅವಾಮಿ ಮೋರ್ಚಾ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್  ಅವರ ಲೋಕ ಜನಶಕ್ತಿ ಪಕ್ಷ ಬಿಜೆಪಿ ಮೈತ್ರಿಕೂಟದಲ್ಲಿತ್ತು. ಇಬ್ಬರು ನಾಯಕರು ದಲಿತ ಮುಖಂಡರಾಗಿದ್ದು, ಬಿಜೆಪಿಗೆ ಈ ಕ್ಷೇತ್ರದಲ್ಲಿ ಹೆಚ್ಚು ಮತಗಳಿಸುವ ಅವಕಾಶವಿತ್ತು. ಆದರೆ ಬಿಜೆಪಿ  ಮುಖಂಡರು ಈ ವಿಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೇ ಹೋಗಿದ್ದು ಬಿಜೆಪಿಗೆ ಮುಳುವಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

5.ಪ್ರಶಾಂತ್ ಕಿಶೋರ್ ಎಂಬ ಪ್ರಚಾರ ಮಾಂತ್ರಿಕ
ಪ್ರಶಾಂತ್ ಕಿಶೋರ್ ಎಂಬ ವ್ಯಕ್ತಿ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮತ್ತೊಂದು ಕಾರಣ ಎಂದು ಹೇಳಲಾಗುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ  ಮೋದಿ ಅವರ ಪರವಾಗಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಪ್ರಶಾಂತ್ ಕಿಶೋರ್ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಪರವಾಗಿ ಕೆಲಸ ಮಾಡಿದ್ದಾರೆ. 37ರ  ಹರೆಯದ ಪ್ರಶಾಂತ್ ಅವರ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್  ಕಮಿಟಿ (ಐಪಿಸಿ) ನಿತೀಶ್ ಗಾಗಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಲೋಕಸಭಾ ಚುನಾವಣೆಯಲ್ಲಿ  ಮೋದಿಯವರನ್ನು ಗೆಲ್ಲಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಪ್ರಚಾರ ಕಾರ್ಯಗಳನ್ನು ರೂಪಿಸಿದ್ದು ಇದೇ ಪ್ರಶಾಂತ್.

ಜನರೊಂದಿಗೆ ಸಂವಹನ ನಡೆಸಲು ಚಾಯ್ ಪೇ ಚರ್ಚಾ,  3 ಡಿ ರ್ಯಾಲಿ  ಮೊದಲಾದ ಕಾರ್ಯಕ್ರಮಗಳ ಐಡಿಯಾ ನೀಡಿದ್ದು ಪ್ರಶಾಂತ್ ಅವರ ಸಿಟಿಜನ್ಸ್ ಫಾರ್ ಅಕೌಂಟೇಬಲ್ ಗವರ್ನನ್ಸ್ (ಸಿಎಜಿ) ಆಗಿತ್ತು. ಇದೇ ರೀತಿಯ ಪ್ರಚಾರ ಕಾರ್ಯಗಳನ್ನು ಬಿಹಾರದಲ್ಲಿಯೂ  ಮಾಡಲಾಗಿತ್ತು. ನಿತೀಶ್ ಅವರು ಜನಸಂಪರ್ಕ ಕಾರ್ಯಕ್ರಮವಾದ ಜನತಾ ದರ್ಬಾರ್‌ಗೆ ನವೀನತೆ ನೀಡಿದ್ದು ಇದೇ ಪ್ರಶಾಂತ್. ಚುನಾವಣಾ ಪ್ರಚಾರದ ಗತಿಯನ್ನೇ ಬದಲಿಸಿದ ಬಿಹಾರಿ ಆರ್  ಬಾಹರಿ (ಬಿಹಾರಿನವ ಮತ್ತು ಹೊರಗಿನವ) ಪ್ರಚಾರ ಕಾರ್ಯವೂ ಪ್ರಶಾಂತ್‌ರದ್ದೇ ಕೊಡುಗೆ.  ಪ್ರಧಾನಿ ನರೇಂದ್ರ ಮೋದಿಯವರನ್ನು ಬಳಸಿ ಬಿಜೆಪಿ ಪ್ರಚಾರ ನಡೆಸಿದಾಗ ಬಿಹಾರಿನವರು  ಬೇಕೋ, ಹೊರಗಿನವರು ಬೇಕೋ ಎಂಬ ಪ್ರಶ್ನೆಯನ್ನಿಟ್ಟುಕೊಂಡು ನಿತೀಶ್ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿದ್ದು ಬಿಹಾರ ಚುನಾವಣೆಯಲ್ಲಿ ಫಲ ನೀಡಿದೆ.

SCROLL FOR NEXT