ದೇಶ

ದೇಶದ ಗಡಿಭಾಗದಲ್ಲಿರುವ ಯುವಕರಿಗೆ ಕದನ ಕಲೆ ಕಲಿಸಲು ಕೇಂದ್ರ ತೀರ್ಮಾನ

Rashmi Kasaragodu
ನವದೆಹಲಿ: ದೇಶದ ಗಡಿಭಾಗದ ಅಭಿವೃದ್ಧಿ ಯೋಜನೆಯ ಅಂಗವಾಗಿ ವಿವಿಧ ದೇಶಗಳಿಗೆ ತಾಗಿಕೊಂಡಿರುವ ಗಡಿಪ್ರದೇಶಗಳ ಯುವಕರಿಗೆ ಕದನಕಲೆ ಕಲಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್‌ಮಾರ್, ಚೀನಾ ಎಂಬೀ ರಾಷ್ಟ್ರಗಳ ಗಡಿಪ್ರದೇಶದಲ್ಲಿ ವಾಸಿಸುವ ಭಾರತದ ಗ್ರಾಮಗಳ ಯುವಕರಿಗೆ ಕದನ ಕಲೆಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಗಡಿ ಪ್ರದೇಶಗಳಲ್ಲಿ ಹೊರದೇಶದಿಂದ ನುಸುಳುಕೋರರು ಬಂದರೆ ಅವರನ್ನು ಎದುರಿಸುವುದಕ್ಕೆ ದೇಶದ ಯುವಕರು ಸನ್ನದ್ಧರಾಗಿರಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಯುವಕರಿಗೆ ತರಬೇತಿ ನೀಡಲು ಗಡಿ ಪ್ರದೇಶದಲ್ಲಿ ಸೇವಾ ನಿರತರಾಗಿರುವ ಸೇನಾ ಮತ್ತು ಅರೆಸೇನಾ ವಿಭಾಗಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.  ಪಾಕಿಸ್ತಾನ, ಬಾಂಗ್ಲಾದೇಶದ ಗಡಿಪ್ರದೇಶದಲ್ಲಿ ಸೇವಾ ನಿರತರಾಗಿರುವ ಗಡಿಭದ್ರತಾ ಸೇನೆ, ನೇಪಾಳ- ಭೂತಾನ್ ಗಡಿಪ್ರದೇಶದಲ್ಲಿರುವ ಸಶಸ್ತ್ರ ಸೀಮಾ ಬಲ್, ಭಾರತ -ಚೀನಾ ಗಡಿಯಲ್ಲಿರು ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಫೋರ್ಸ್ ಮೊದಲಾದವುಗಳಿಗೆ ಈ ನಿರ್ದೇಶನ ನೀಡಲಾಗಿದೆ. 
ಆಯುಧಧಾರಿಗಳನ್ನು ಎದುರಿಸುವುದು ಹೇಗೆ, ಶೂಟಿಂಗ್, ಬಿಲ್ಲು ವಿದ್ಯೆ, ಬಾಕ್ಸಿಂಗ್ ಮೊದಲಾದ ಕಲೆಗಳನ್ನೂ ಯುವಕರಿಗೆ ಕಲಿಸಿಕೊಡಲಾಗುವುದು. 
ಭಾರತ ಇದೀಗ ಈ ರೀತಿಯ ಯೋಜನೆಗೆ ಚಿಂತನೆ ನಡೆಸಿದ್ದರೂ, ಚೀನಾ, ಸಿಂಗಾಪುರ್, ಇಸ್ರೇಲ್, ದಕ್ಷಿಣ ಕೊರಿಯಾ ಮೊದಲಾರ ದೇಶಗಳಲ್ಲಿ ಈಗಾಗಲೇ ಯುವಕರಿಗೆ ಇಂಥಾ ತರಬೇತಿಗಳನ್ನು ನೀಡಲಾಗುತ್ತಿದೆ.
SCROLL FOR NEXT