ಶ್ರೀನಗರ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸಿದ್ದರಿಂದ ಜನ ಜೀವನಕ್ಕೆ ಅಡಚಣೆ ಉಂಟಾಗಿತ್ತು.
ಗೌಹರ್ ಅಹ್ಮದ್ ಎಂಬ ಯುವಕನ ಸಾವನ್ನು ಖಂಡಿಸಿ ಹುರಿಯತ್ ಕಾನ್ಫರೆನ್ಸ್ ಹಾಗೂ ಜೆಕೆಎಲ್ ಎಫ್ ಪ್ರತ್ಯೇಕತಾವಾದಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಪ್ರತ್ಯೇಕತಾವಾದಿಗಳ ಬಂದ್ ಕರೆ ಹಿನ್ನೆಲೆಯಲ್ಲಿ ಏಳು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿರ್ಬಂಧ ವಿಧಿಸಲಾಗಿತ್ತಾದರೂ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸಿದ್ದಾರೆ.
ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿಯದೇ ಇದ್ದರೂ, ಕೆಲವು ಕ್ಯಾಬ್ ವಾಹನಗಳು ಓಡಾಡುತ್ತಿದವು ಎಂದು ಕಾಶ್ಮೀರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ನಿವಾಸದೆದುರು ಕಲ್ಲು ತೂರಾಟ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಕಾಶ್ಮೀರ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಈ ಘಟನೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದ. ಯುವಕನ ಸಾವನ್ನು ಖಂಡಿಸಿ ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದರು.