ತಿರುಪತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆಯಲ್ಲಿ ಉಂಟಾಗಿರುವ ರೋನೊ ಚಂಡಮಾರುತದಿಂದಾಗಿ ಪವಿತ್ರ ಕ್ಷೇತ್ರ ತಿರುಮಲದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಭಕ್ತರು ಪರದಾಡುವಂತಾಗಿದೆ.
ತಿರುಮಲದಲ್ಲಿ ಮುಂಜಾನೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದೆ. ದೇವರ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರು ಭಾರಿ ಮಳೆಯಿಂದಾಗಿ ನಿಗದಿತ ವೇಳೆಯಲ್ಲಿ ದರ್ಶನ ಮಾಡಲಾಗದೆ ಪರದಾಡುವಂತಾಗಿದೆ. ಇನ್ನು ತಿರುಪತಿಯಿಂದ ತಿರುಮಲಕ್ಕೆ ಕಾಲುದಾರಿಯಲ್ಲಿ ಸಾಗುವ ಭಕ್ತರಿಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಡಚಣೆಯಾಗಿದ್ದು, ಅಲ್ಲಲ್ಲಿ ನಿರ್ಮಿಸಿರುವ ತಂಗುದಾಣಗಳಲ್ಲಿ ಭಕ್ತರು ಆಶ್ರಯ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇತ್ತ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಒಡಿಶಾ ಕಡಲ ತೀರದಲ್ಲಿ ವೇಗವಾಗಿ ಗಾಳಿ ಬೀಸುತ್ತಿದ್ದು, ಗಂಟೆಗೆ ಸುಮಾರು 50 ಕಿ.ಮೀ ನಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಕರಾವಳಿ ರಕ್ಷಣಾ ಪಡೆ ಹೈಅಲರ್ಟ್ ಘೋಷಣೆ ಮಾಡಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ರವಾನಿಸಿದೆ. ಮತ್ತೊಂದೆಡೆ ಆಂಧ್ರ ಪ್ರದೇಶದ ಸಮುದ್ರ ತೀರಗಳಲ್ಲಿ ಕಡಲ್ಕೊರೆತ ಹೆಚ್ಚಿದ್ದು, ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಸಮುದ್ರ ನೀರು ವೇಗ ಬಂದ ತೀರಕ್ಕೆ ಅಪ್ಪಳಿಸುತ್ತಿರುವುದರಿಂದ ಕಡಲ್ಕೊರೆತ ತೀವ್ರವಾಗಿದೆ ಎಂದು ತಿಳಿದುಬಂದಿದೆ.
ಆಂಧ್ರ ಪ್ರದೇಶದ ತಿರುಪತಿ, ಕರ್ನೂಲು, ಚಿತ್ತೂರು ಮತ್ತು ರಾಯಲಸೀಮಾ ಪ್ರಾಂತ್ಯಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲೂ ಮಳೆ ಸಾಧ್ಯತೆ
ತಮಿಳುನಾಡಿಗೆ ರೋನೊ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ರಾಜ್ಯದ ಮೇಲೂ ಅದರ ಪರಿಣಾಮ ಉಂಟಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರೋನೊ ಚಂಡಮಾರುತ ಇಂದು ಸಂಜೆ ವೇಳೆಗೆ ತಮಿಳುನಾಡಿಗೆ ಅಪ್ಪಳಿಸಲಿದೆ.