ನವದೆಹಲಿ: ಬರಗಾಲದಿಂದ ತತ್ತರಿಸಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ 1540 ಕೋಟಿ ನೆರವು ನೀಡಲು ಸೋಮವಾರ ಅನುಮೋದನೆ ನೀಡಿದೆ.
ಭೀಕರ ಬರ ಹಾಗೂ ವ್ಯಾಪಕ ಪ್ರವಾಹದಿಂದ ತತ್ತರಿಸಿದ್ದ ಕರ್ನಾಟಕ ಹಾಗೂ ಗುಜರಾತ್‌ಗೆ ಭೇಟಿ ಅಧ್ಯಯನ ನಡೆಸಿ ಕೇಂದ್ರ ತಂಡ ನೀಡಿದ್ದ ಶಿಫಾರಸುಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಕರ್ನಾಟಕಕ್ಕೆ 1540 ಕೋಟಿ ನೆರವು ,ಹಾಗೂ ಪ್ರವಾಹದಿಂದ ತತ್ತರಿಸಿದ ಗುಜರಾತ್‌ಗೆ ರೂ. 562 ಕೋಟಿ ನೆರವು ಪ್ರಕಟಿಸಲಾಗಿದೆ
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕರ್ನಾಟಕಕ್ಕೆ 1540 ಕೋಟಿ ರೂಪಾಯಿ ಹಾಗೂ ಗುಜರಾತ್‌ಗೆ 562 ಕೋಟಿ ರೂಪಾಯಿ ನೆರವು ನೀಡಲು ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಸಭೆಯಲ್ಲಿ ರಾಜನಾಥ್ ಸಿಂಗ್ ಅವರಲ್ಲದೇ, ಹಣಕಾಸು ಸಚಿವ ಅರುಣ್ ಜೇಟ್ಲಿ, ‘ನೀತಿ’ ಆಯೋಗ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಮತ್ತಿತ್ತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.