ಮುಂಬೈ: ಬಂಧಿತ ಭೂಗತ ಪಾತಕಿ ರಾಜೇಂದ್ರ ಎಸ್ ನಿಖಲ್ಜೆ ಅಲಿಯಾಸ್ ಛೋಟಾ ರಾಜನ್ ಜೊತೆಗೆ ಭಾಯಿ ದೂಜ್ ಆಚರಿಸಲು ಅವಕಾಶ ಕೋರಿ ಅವನ ಸಹೋದರಿಯರು ಶುಕ್ರವಾರ ಸೆಷನ್ಸ್ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಪಟಿಯಾಲಾ ಹೌಸ್ ಕೋರ್ಟ್ ನ ಸೆಷನ್ಸ್ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿರುವ ಸುನಿತಾ ಚೌಹಾನ್ ಮತ್ತು ನಳಿನಿ ಸಕ್ಪಾಲ್, ಭೂಗತ ದೊರೆಯನ್ನು ಭೇಟಿ ಮಾಡಿ ಬಾಯಿ ದೂಜ್ ಆಚರಿಸಲು ಅವಕಾಶ ನೀಡಲು ಕೋರಿದ್ದಾರೆ.
೨೭ ವರ್ಷಗಳ ನಂತರ ಭಾರತಕ್ಕೆ ಕರೆತರಲಾಗಿರುವ ಛೋಟಾ ರಾಜನ್ ನನ್ನು ಭೇಟಿ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.
ದೇಶದಿಂದ ಇಷ್ಟು ವರ್ಷಗಳವರೆಗೆ ದೂರ ಉಳಿದ ನಂತರ ಈಗಲಾದರೂ ಅವನನ್ನು ಭೇಟಿ ಮಾಡಿ ಆಶೀರ್ವಾದ ಮಾಡಲು ಅವಕಾಶ ಕೊಡಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಸಿಬಿಐ ವಿಶೇಶ ನ್ಯಾಯಾಲಯದ ಸೆಷನ್ಸ್ ನ್ಯಾಯಾಧೀಶ ವಿನೋದ್ ಕುಮಾರ್ ಶುಕ್ರವಾರ ಮಧ್ಯಾಹ್ನ ಅವರ ಮನೆಯಲ್ಲೇ ವಿಚಾರಣೆ ಆಲಿಸಲಿದ್ದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ ವಾಸಿಸುವ ಸಹೋದರಿಯರು ಈಗ ಈ ಮನವಿ ಸಲ್ಲಿಸಲು ದೆಹಲಿಗೆ ತೆರಳಿದ್ದಾರೆ. ಛೋಟಾ ರಾಜನ್ ನನ್ನು ಸಿಬಿಐ ಬಂಧಿಸಿ ದೆಹಲಿಯಲ್ಲಿ ಇರಿಸಲಾಗಿದೆ.